ADVERTISEMENT

ದೇವೀರಮ್ಮ ಉತ್ಸವಕ್ಕೆ ಸಿದ್ಧತೆ

19, 20ರಂಂದು ಬೆಟ್ಟದ ಮೇಲೆ ದೇವಿಯ ದರ್ಶನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:53 IST
Last Updated 14 ಅಕ್ಟೋಬರ್ 2025, 6:53 IST
ದೇವಿರಮ್ಮ ಗುಡ್ಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ದೇವಿರಮ್ಮ ಗುಡ್ಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಿಕ್ಕಮಗಳೂರು: ಬೆಟ್ಟದ ತುದಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಬಿಂಡಿಗ ದೇವೀರಮ್ಮ ಉತ್ಸವಕ್ಕೆ ವಾರವಷ್ಟೇ ಬಾಕಿ ಇದ್ದು, ಸಿದ್ಧತೆ ಕಾರ್ಯ ಭರದಿಂದ ಸಾಗಿವೆ.

ಅಶ್ವಯುಜ ಬಹುಳ ಚತುರ್ದಶಿ ದಿನವಾದ ಅ.19 (ಭಾನುವಾರ) ಬೆಳಿಗ್ಗೆ 7 ಗಂಟೆಗೆ ದೇವಿರಮ್ಮ ಬೆಟ್ಟದಲ್ಲಿ ಅಭಿಷೇಕ ಪೂಜೆ ಪ್ರಾರಂಭವಾದ ನಂತರ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ತನಕ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗಲಿದೆ. ಮರುದಿನ ಸೋಮವಾರ ಕೂಡ ಬೆಳಿಗ್ಗೆ 7ರಿಂದ ಪೂಜೆ ಮಧ್ಯಾಹ್ನ 3 ಗಂಟೆ ತನಕ ಮಾತ್ರ ದರ್ಶನಕ್ಕೆ ಅವಕಾಶ ಇದ್ದು, ಸಂಜೆ 7 ಗಂಟೆಗೆ ದೀಪೋತ್ಸವ ನಡೆಯಲಿದೆ.

ಬೆಟ್ಟದ ಕೆಳಗಿರುವ ದೇವಿರಮ್ಮ ದೇಗುಲದಲ್ಲಿ 21ರಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ದೇವಿಗೆ ಉಡುಗೆ, ಪೂಜೆ ನಂತರ ಸಂಜೆ 6.30ಕ್ಕೆ ಬೆಣ್ಣೆ ಬಟ್ಟೆ ಸುಡುವ ಕಾರ್ಯಕ್ರಮವಿದೆ. ಬುಧವಾರ ಬೆಳಿಗ್ಗೆ 8ರಿಂದ ಮಹಾಮಂಗಳಾರತಿ, ರಾತ್ರಿ ಗಣಪತಿ ಪೂಜೆ, ಪುಣ್ಯಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ನಡೆಯಲಿದೆ. ಅ.23ರಂದು ಗುರುವಾರ ಬೆಳಿಗ್ಗೆ ಸೂರ್ಯೋದಯ ಸಂದರ್ಭದಲ್ಲಿ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ಇರಲಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ADVERTISEMENT

ಬೆಟ್ಟ ಏರುವ ಭಕ್ತರು ಬರಿಗಾಲಿನಲ್ಲೇ ಹತ್ತಬೇಕು. ಬೆಟ್ಟದ ಮೇಲೆ ತೆಂಗಿನ ಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಒಮ್ಮೆಗೆ ಬೆಟ್ಟ ಏರುವುದರಿಂದ ಉಂಟಾಗುವ ದಟ್ಟಣೆ ತಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಉಪವಿಭಾಗಾಧಿಕಾರಿ ಸುದರ್ಶನ್ ಅವರು ಸೋಮವಾರ ಬೆಟ್ಟ ಏರಿ ಪರಿಸ್ಥಿತಿ ಅವಲೋಕಿಸಿದರು. ಸತತ ಮಳೆಯಿಂದ ಗುಡ್ಡದ ಮೇಲೆ ಏನಾದರೂ ತೊಂದರೆಯಾಗಿದೆಯೇ, ಜನ ಸುಲಭವಾಗಿ ಬೆಟ್ಟ ಏರಬಹುದೇ ಎಂಬುದನ್ನೂ ಪರಿಶೀಲಿಸಿದರು. 

ಭಕ್ತರ ಹಿತ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳು ಹಾಗೂ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಚಿಕ್ಕಮಗಳೂರು ಅಡ್ವೆಂಚರ್ಸ್ ಸ್ಪೋರ್ಟ್ಸ್‌ ಕ್ಲಬ್ ಸದಸ್ಯರು ಜತೆಯಲ್ಲಿದ್ದರು. 

ಬಳಿಕ ದೇವಾಲಯ ಸಮಿತಿಯ ಮುಖಂಡರೊಂದಿಗೆ ಎಸ್ಪಿ ಮಾತುಕತೆ ನಡೆಸಿದರು. ವಾಹನ ನಿಲುಗಡೆ ವ್ಯವಸ್ಥೆ, ಸಂಚಾರ ಸುರಕ್ಷತೆ ಕುರಿತೂ ಸಮಾಲೋಚನೆ ನಡೆಸಿದರು.

ಎರಡು ದಿನ ದೇವಿ ದರ್ಶನಕ್ಕೆ ಅವಕಾಶ:

ಈ ಹಿಂದೆ ಒಂದೇ ದಿನ ಇದ್ದ ದೇವಿರಮ್ಮ ದೇವಿಯ ದರ್ಶನಕ್ಕೆ ಈ ವರ್ಷ ಎರಡು ದಿನ ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ಹಿಂದಿನ ದಿನ ರಾತ್ರಿ ದೇವಿಯ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವರ್ಷ ಬೆಳಿಗ್ಗೆಯೇ ತೆಗೆದುಕೊಂಡು ಹೋಗಿ 9 ರಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಜನ ರಾತ್ರಿ ವೇಳೆ ಬೆಟ್ಟ ಏರುವುದುನ್ನು ತಪ್ಪಿಸಲು ಮತ್ತು ಒಂದೇ ದಿನ ದಟ್ಟಣೆ ಉಂಟಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಮಳೆ ಮತ್ತು ಜಾರಿಕೆ ಇರುವುದರಿಂದ ಭಕ್ತರು ಹಗಲಿನ ವೇಳೆ ಬೆಟ್ಟ ಏರಬೇಕು ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕುಲಶೇಖರ್ ಮನವಿ ಮಾಡಿದರು.

15ರಿಂದ 60 ವರ್ಷದವರಿಗೆಷ್ಟೇ ಪ್ರವೇಶ

ಉತ್ಸವ ನಡೆಯುವ ಎರಡೂ ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿದೆ. 15 ವರ್ಷ ಮೇಲ್ಪಟ್ಟ 60 ವರ್ಷದೊಳಗಿನವರಿಗೆ ಅವಕಾಶ ನೀಡಲಾಗುತ್ತಿದೆ. ತರೀಕೆರೆ ಕಡೆಯಿಂದ ಲಿಂಗದಹಳ್ಳಿ ಮಾರ್ಗದ ರಸ್ತೆಯಲ್ಲಿ ದೇವೀರಮ್ಮ ದೇಗುಲಕ್ಕೆ ಬರುವ ವಾಹನಗಳಿಗಷ್ಟೇ ಅವಕಾಶ ನೀಡಲಾಗುವುದು. ಅನ್ಯಕಾರ್ಯಕ್ಕೆ ಚಿಕ್ಕಮಗಳೂರಿಗೆ ಬರುವ ಇತರೆ ವಾಹನಗಳು ಎರಡೂ ದಿನ ಕಡೂರು ಮಾರ್ಗದಲ್ಲಿ ಬರಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತರೀಕೆರೆ-ಲಿಂಗದಳ್ಳಿ-ಸಂತವೇರಿ ಮಾರ್ಗವಾಗಿ ಬರುವ ಭಕ್ತರು ವಾಹನಗಳನ್ನು ಕುಮಾರಗಿರಿಯಲ್ಲಿ ನಿಲುಗಡೆ ಮಾಡಬೇಕು. ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವವರು ವಾಹನಗಳನ್ನು ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿಲುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆಯ ಬದಿ ನಿಲ್ಲಿಸಬಾರದು ಎಂದು ಮನವಿ ಮಾಡಿದೆ. ಅ.19ರಿಂದ 23ರವರೆಗೆ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಗೇಟ್‌ನಿಂದ ಕುಮಾರಗಿರಿ ಆರ್ಚ್‌ ತನಕ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಚಿಕ್ಕಮಗಳೂರಿನಿಂದ ಬಿಂಡಿಗಾ ದೇವಿರಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರು ಚಿಕ್ಕಮಗಳೂರಿನ ಐ.ಜಿ.ರಸ್ತೆ ಎಂ.ಜಿ-ರಸ್ತೆ ಡಿಎಸಿಜಿ ಪಾಲಿಟೆಕ್ನಿಕ್ ಮೈದಾನಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಿಂಡಿಗಾ ಗ್ರಾಮಕ್ಕೆ ಪ್ರಯಾಣಿಸಬಹುದು ಎಂದು ತಿಳಿಸಿದೆ.

ಇತರೆ ಪ್ರವಾಸಿಗರಿಗೆ ನಿರ್ಬಂಧ

ಮುಳ್ಳಯ್ಯನಗಿರಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಗಾಳಿಕೆರೆ ಹಾಗೂ ಮಾಣಿಕ್ಯಧಾರಾ ಪ್ರದೇಶಕ್ಕೆ ಬರುವ ಇತರೆ ಪ್ರವಾಸಿಗರು ಅ.19 ಮತ್ತು 20ರಂದು ಗಿರಿಭಾಗಕ್ಕೆ ತೆರಳದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಹೋಂಸ್ಟೆ ರೆಸಾರ್ಟ್‌ ಮತ್ತು ವಸತಿ ಗೃಹಗಳಲ್ಲಿ ಈಗಾಗಲೇ ಮುಂಗಡವಾಗಿ ಕೊಠಡಿ ಕಾಯ್ದಿರಿಸಿರುವ ಪ್ರವಾಸಿಗರಿಗೆ ಕೈಮರ ಚೆಕ್‌ಪೋಸ್ಟ್‌ನಲ್ಲಿ ನಿರ್ಭಂದ ಇರುವುದಿಲ್ಲ. ಆದರೆ ಅವರಿಗೆ ಸೀತಾಳಯ್ಯನಗಿರಿ ಮುಳ್ಳಯ್ಯನಗಿರಿ ಮತ್ತು ಮಾಣಿಕ್ಯಧಾರ ಪ್ರವಾಸಕ್ಕೆ ನಿರ್ಬಂಧ ಇರಲಿದೆ ಎಂದು ಹೇಳಿದೆ. ‘ಎರಡೂ ದಿನ ಆನ್‌ಲೈನ್ ಬುಕ್ಕಿಂಗ್ ನಿರ್ಬಂಧಿಸಲಾಗವುದು. ದೇವಿರಮ್ಮ ಬೆಟ್ಟಕ್ಕೆ ತೆರಳುವವರಿಗೆ ಮುಕ್ತವಾಗಿ ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘‍‍ಪ್ರಜಾವಾಣಿ’ಗೆ ತಿಳಿಸಿದರು. ‘ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಅಗ್ನಿಶಾಮಕ ದಳ ಜಿಲ್ಲಾ ವಿಪ್ಪತ್ತು ನಿರ್ವಹಣಾ ಘಟಕ ಅರಣ್ಯ ಇಲಾಖೆ ಸೇರಿ ಬೆಟ್ಟದಲ್ಲಿ 10 ತಂಡಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿವೆ. ಭಕ್ತರು ಬೆಟ್ಟ ಏರಲು ನೆರವಾಗಲಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.