ADVERTISEMENT

ಚಿಕ್ಕಮಗಳೂರು: ದೇವಿರಮ್ಮ ಬೆಟ್ಟ ಏರಿ ಪುಳಕಿತರಾದ ಭಕ್ತರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 12:27 IST
Last Updated 19 ಅಕ್ಟೋಬರ್ 2025, 12:27 IST
   

ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಮಾತ್ರ ಬೆಟ್ಟದ ತುದಿಯಲ್ಲಿ ದರ್ಶನ ನೀಡುವ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಳ್ಳಲು ಭಾನುವಾರ ದೇವಿರಮ್ಮ ಬೆಟ್ಟದಲ್ಲಿ ಭಕ್ತ ಸಾಗರವೇ ನೆರೆದಿತ್ತು.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ಜಾತ್ರೆ ಭಾನುವಾರ ಆರಂಭವಾಗಿದೆ.  ಇಡೀ ದೇವಿರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿತ್ತು. ಕಲ್ಲು ಮುಳ್ಳುಗಳ ಹಾದಿಯಲ್ಲಿ ಬರಿಗಾಲಿನಲ್ಲೇ ಸಾಗಿದ ಭಕ್ತರು, ಬೆಟ್ಟ ಏರಿ ದೇವಿಯ ದರ್ಶನ ಪಡೆದ ಬಳಿಕ ಪುಳಕಿತರಾದರು.

ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರದ ಬೆಟ್ಟದ ತುದಿಯಲ್ಲಿ ಇರುವ ದೇಗುಲಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ನರಕ ಚತುರ್ದಶಿಯ ದಿನ ಮಾತ್ರ ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಅವಕಾಶ ಇತ್ತು. ಆದ್ದರಿಂದ ಹಿಂದಿನ ದಿನ ರಾತ್ರಿಯೇ ಭಕ್ತರು ಬೆಟ್ಟ ಏರುತ್ತಿದ್ದರು.

ADVERTISEMENT

ರಾತ್ರಿ ವೇಳೆ ಮಳೆ ಸುರಿಯುತ್ತಿದ್ದು, ಬೆಟ್ಟ ಏರಿದರೆ ಅಪಾಯ ಎಂಬ ಕಾರಣಕ್ಕೆ ರಾತ್ರಿ ವೇಳೆ ಅವಕಾಶ ನೀಡದಿರಲು ದೇವಾಲಯ ಸಮಿತಿ ಮತ್ತು ಜಿಲ್ಲಾಡಳಿತ ತೀರ್ಮಾನಿಸಿದೆ. ಆದ್ದರಿಂದ ಮುನ್ನ ದಿನವಾದ ಭಾನುವಾರವೇ ಬೆಳಿಗ್ಗೆಯಿಂದ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಚೂಪು ಆಕೃತಿಯ ಈ ಬೆಟ್ಟದ ತುದಿಗೆ ಭಾನುವಾರ ಏರಿದ ಭಕ್ತರು ಸಂಭ್ರಮಿಸಿದರು. ಶನಿವಾರ ರಾತ್ರಿ ಮಳೆ ಸುರಿದಿದ್ದರಿಂದ ಜಾರಿಕೆ ಹೆಚ್ಚಾಗಿಯೇ ಇತ್ತು. ಇದರ ನಡುವೆ ಬೆಟ್ಟ ಹತ್ತಲು ಹರಸಾಹಸಪಟ್ಟರು. ಹಾದಿಯುದ್ದಕ್ಕೂ ಎಲ್ಲರೂ ಎಲ್ಲರಿಗಾಗಿ ಸಹಕಾರ ನೀಡುತ್ತಲೆ ಪಯಣ ಸಾಗಿತು. ಒಬ್ಬರಿಗೊಬ್ಬರು ಆಸರೆಯಾಗಿ ಕೈ ಕೈ ಹಿಡಿದು ನಡೆದರು.

ಕಡಿದಾದ ಪ್ರದೇಶದಲ್ಲಿ ಭಕ್ತರಿಗೆ ನೆರವಾಗಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅಲ್ಲಲ್ಲಿ ನಿಂತಿದ್ದರು. ಹಗ್ಗದ ಸಹಾಯದಿಂದ ಮೇಲೆ ಏರಲು ಸಹಕಾರ ಮಾಡಿದರು.

ಜಾತ್ರಾ ಮಹೋತ್ಸದ ನಿಮಿತ್ತ ಮಲ್ಲೇನಹಳ್ಳಿ, ಬಿಂಡಿಗ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಟ್ಟದ ಪದತಲದಲ್ಲಿನ ಬಿಂಡಿಗದ ದೇವೀರಮ್ಮ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇನ್ನುಳಿದ ಎರಡು ಮಾರ್ಗಗಳಲ್ಲೂ ಭಕ್ತರು ಬೆಟ್ಟ ಇಳಿದು ವಾಹನಗಳಲ್ಲಿ ಸಾಗುವ ಕಡೆ ಪ್ರಸಾದ ಲಭ್ಯವಾಗುವಂತೆ ದೇವಸ್ಥಾನ ಮಂಡಳಿ ವ್ಯವಸ್ಥೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.