ADVERTISEMENT

ಚಿಕ್ಕಮಗಳೂರು| ಸಾರಗೋಡು ಸಂತ್ರಸ್ತರು ಇನ್ನೂ ಅತಂತ್ರ: ಕಾಡಿನಲ್ಲೇ ಉಳಿದ 16 ಕುಟುಂಬ

ವಿಜಯಕುಮಾರ್ ಎಸ್.ಕೆ.
Published 30 ಅಕ್ಟೋಬರ್ 2025, 5:37 IST
Last Updated 30 ಅಕ್ಟೋಬರ್ 2025, 5:37 IST
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರುಗೋಡು ಮೀಸಲು ಅರಣ್ಯದ ಸಂತ್ರಸ್ತರಿಗೆ ಬಾಳೂರು ಹೋಬಳಿ ಹಾದಿಓಣಿ ಬಳಿ ನಿವೇಶನಕ್ಕೆ ನೀಡಿರುವ ಜಾಗ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರುಗೋಡು ಮೀಸಲು ಅರಣ್ಯದ ಸಂತ್ರಸ್ತರಿಗೆ ಬಾಳೂರು ಹೋಬಳಿ ಹಾದಿಓಣಿ ಬಳಿ ನಿವೇಶನಕ್ಕೆ ನೀಡಿರುವ ಜಾಗ   

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲೇ ಉಳಿದಿದ್ದ 16 ಕುಟುಂಬಗಳ ಸ್ಥಳಾಂತರಕ್ಕೆ ಲಾಟರಿ ಮೂಲಕ ಜಮೀನು ಮತ್ತು ನಿವೇಶನ ಹಂಚಿಕೆಯಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಈ ಕುಟುಂಬಗಳು ಕಾಡಿನಿಂದ ಹೊರಬಂದು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಅತಂತ್ರ ಸ್ಥಿತಿ ಮುಂದುವರಿದಿದೆ.

ಸಾರಗೋಡು ಮೀಸಲು ಅರಣ್ಯ ಘೋಷಣೆ ಸಂದರ್ಭದಲ್ಲಿ ಮಂಡುಗುಳಿಹಾರ ಮತ್ತು ಬೈರಿಗದ್ದೆಯ ಸುತ್ತಮುತ್ತಲ 70ಕ್ಕೂ ಹೆಚ್ಚು ಕುಟುಂಬಗಳನ್ನು 2006ರಲ್ಲೇ ಸ್ಥಳಾಂತರ ಮಾಡಲಾಗಿತ್ತು. 1978ಕ್ಕೂ ಪೂರ್ವದಿಂದ ನೆಲೆಸಿರುವ ಕುಟುಂಬಗಳು ಎಂಬ ಕಾರಣಕ್ಕೆ ಪಾರಂಪರಿಕ ಅರಣ್ಯವಾಸಿಗಳು ಎಂದು ತೀರ್ಮಾನಿಸಿ 16 ಕುಟುಂಬಗಳನ್ನು ಇಲ್ಲೇ ಉಳಿಸಲಾಗಿತ್ತು.

ಕಾಡು ಹೆಚ್ಚಾದಂತೆ ವನ್ಯಜೀವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆನೆಗಳು ಅರಣ್ಯ ದಾಟಿ ಊರಿನತ್ತ ಬರದಂತೆ ಸೋಲಾರ್ ಆಧಾರಿತ ಟೆಂಟಕಲ್ ಬೇಲಿಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. 16 ಕುಟುಂಬಗಳು ಈ ಬೇಲಿಯೊಳಗೆ ಉಳಿದುಕೊಂಡಿದ್ದವು. ಊರಿನ ಸಂಪರ್ಕ ರಸ್ತೆಗೆ ಬರಬೇಕೆಂದರೆ ಕನಿಷ್ಠ‌ ಮೂರು‌ ಕಿಲೋ ಮೀಟರ್ ನಡೆದು ಸಾಗಬೇಕಿದೆ.

ADVERTISEMENT

16 ಕುಟುಂಬಗಳನ್ನು ಸ್ಥಳಾಂತರ ಮಾಡಲು 2024ರ ಅ. 28ರಂದು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ನಿವಾಸಿಗಳ 18 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದೆ ಎಂಬಂತಾಗಿತ್ತು. ಬಾಳೂರು ಹೋಬಳಿ ಹಾದಿಓಣಿ ಸರ್ವೆ ನಂಬರ್‌ನಲ್ಲಿ ಗುರುತಿಸಿರುವ ಜಾಗ ವಿತರಣೆಗೆ 2025ರ ಜನವರಿ 10ರಂದು ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು. ಹಾದಿಓಣಿ ಗ್ರಾಮದ ಸರ್ವೆ ನಂಬರ್ 21ರಲ್ಲಿ 16 ಕುಟುಂಬಗಳಿಗೆ ತಲಾ ಎರಡು ಎಕರೆ ಜಾಗ ಮತ್ತು ಮನೆ ನಿರ್ಮಾಣ ಮಾಡಿಕೊಳ್ಳಲು 4 ಗುಂಟೆ ಜಾಗ ನೀಡಲಾಗಿದೆ.

ತಲಾ ಎರಡು ಎಕರೆಯಂತೆ ಜಾಗ ಪ್ರತ್ಯೇಕಿಸಿ ನಕ್ಷೆ ಸಿದ್ಧಪಡಿಸಿ ಬ್ಲಾಕ್‌ಗಳನ್ನು ಮಾಡಲಾಗಿದೆ. ಸಂತ್ರಸ್ತರ ಜಾಗ ಪ್ರತ್ಯೇಕಿಸಿ ಕೊಡಲಾಗಿದ್ದು, ಬೇಲಿಗಳೂ ನಿರ್ಮಾಣವಾಗಿವೆ. ಆದರೆ, ರಸ್ತೆ ಇಲ್ಲ, ಕುಡಿಯುವ ನೀರಿನ ಸಂಪರ್ಕ ಇಲ್ಲ, ಮನೆ ನಿರ್ಮಾಣ ಮಾಡಿಕೊಳ್ಳಲು ಅರಣ್ಯ ಇಲಾಖೆ ನೀಡಬೇಕಿರುವ ಪರಿಹಾರ ಬಂದಿಲ್ಲ. ಇದರಿಂದಾಗಿ ಭೂಮಿ ಮತ್ತು ನಿವೇಶನ ದೊರೆತರೂ ಬದುಕು ಅತಂತ್ರವಾಗಿದೆ ಎನ್ನುತ್ತಾರೆ ಸಂತ್ರಸ್ತರು.

ಮಂಡುಗುಳಿಹಾರ ಮತ್ತು ಬೈರಿಗದ್ದೆಯ ಕಾಡಿನಲ್ಲೇ ಸಂತ್ರಸ್ತರ ಜೀವನ ಮುಂದುವರಿದಿದೆ. ಟೆಂಟಕಲ್ ಬೇಲಿಯೊಳಗೆ ಕಾಡು ಪ್ರಾಣಿಗಳ ಜತೆಯಲ್ಲೇ ಭಯದ ಜೀವನ ಮುಂದುವರಿಸಿದ್ದಾರೆ. 

ಅರಣ್ಯ ಇಲಾಖೆ ಜತೆ ಚರ್ಚಿಸಿದ್ದೇನೆ: ಶಾಸಕಿ

‘ಮನೆ ನಿರ್ಮಾಣ ಮಾಡಿಕೊಳ್ಳಲು ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕು ಎಂಬ ನಿರೀಕ್ಷೆ ಸಂತ್ರಸ್ತರಿಗೆ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಾನೂ ಮಾತನಾಡಿದ್ದೇನೆ’ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ‘ಸಾಕಷ್ಟು ಪ್ರಯತ್ನದ ಫಲವಾಗಿ ಭೂಮಿ ಮತ್ತು ನಿವೇಶನ ದೊರೆತಿದೆ. ಹಕ್ಕುಪತ್ರವೂ ವಿತರಣೆಯಾಗಿದೆ. ಅರಣ್ಯ ಇಲಾಖೆಯಿಂದ ಆಗಬೇಕಿರುವ ಬಾಕಿ ಕೆಲಸ ಹಂತ–ಹಂತವಾಗಿ ಆಗಲಿದೆ. ರಸ್ತೆ ಕುಡಿಯುವ ನೀರಿನ ಸಂಪರ್ಕ ಸೇರಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅರಣ್ಯ ಇಲಾಖೆಗೆ ತಿಳಿಸಿದ್ದೇನೆ. ಶೀಘ್ರವೇ ಅನುದಾನ ಲಭ್ಯವಾಗುವ ವಿಶ್ವಾಸ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.