ADVERTISEMENT

ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆ: ಕೆ.ಎನ್. ರಮೇಶ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 4:56 IST
Last Updated 3 ಡಿಸೆಂಬರ್ 2021, 4:56 IST
ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಯುಜಿಡಿ ಆಳುಗುಂಡಿ ಸಮಸ್ಯೆಯನ್ನು ಗುರುವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವೀಕ್ಷಿಸಿದರು.
ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಯುಜಿಡಿ ಆಳುಗುಂಡಿ ಸಮಸ್ಯೆಯನ್ನು ಗುರುವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವೀಕ್ಷಿಸಿದರು.   

ಬೀರೂರು: ನಾಗರಿಕರ ದೂರಿನ ಮೇರೆಗೆ ಆಶ್ರಯ ಬಡಾವಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಒತ್ತುವರಿ ತೆರವಿಗೆ ಕ್ರಮ ವಹಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ಪಟ್ಟಣದ ಗುರುಭವನದಲ್ಲಿ ಗುರುವಾರ ಸಿಬ್ಬಂದಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಅವರು, ಆಶ್ರಯ ಬಡಾವಣೆಗೆ ಭೇಟಿ ನೀಡಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ, ‘ಹಕ್ಕುಪತ್ರವಿದ್ದರೂ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸ್ಥಳ ಪತ್ತೆಯಾಗುತ್ತಿಲ್ಲ. ಯಗಟಿ ರಸ್ತೆಯ ಮುತ್ತಿನಕಟ್ಟೆ ಆಶ್ರಯ ಬಡಾವಣೆಯು ತ್ಯಾಜ್ಯ ವಿಲೇವಾರಿ ಘಟಕವಾಗಿ ಪರಿವರ್ತನೆಯಾಗಿದೆ’ ಎಂದು ಆರೋಪಿಸಿದರು.

ADVERTISEMENT

ಈ ಕುರಿತು ಮುಖ್ಯಾಧಿಕಾರಿ ಕೆ.ಎಂ.ಕಲಾವತಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ‘20 ವರ್ಷಗಳಿಂದ ಆಶ್ರಯ ಬಡಾವಣೆಗೆ ಸಂಬಂಧಿಸಿದ ಭೂಮಿಯ ವರದಿ ನೀಡಬೇಕು. ಅತಿಕ್ರಮದ ಬಗ್ಗೆ ಸುಳಿವು ಇದ್ದಲ್ಲಿ ಪೊಲೀಸ್ ಸಹಕಾರದೊಂದಿಗೆ ಅದನ್ನು ತೆರವು ಮಾಡಬೇಕು’ ಎಂದು ಆದೇಶಿಸಿದರು.

‘ಬೀರೂರು-ಅಜ್ಜಂಪುರ ರಸ್ತೆಯಲ್ಲಿ ಕೆ-ಶಿಪ್ ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ಒಳಚರಂಡಿಯ ಆಳಗುಂಡಿಗಳು ಜಖಂಗೊಂಡು ಸಮಸ್ಯೆಯಾಗಿ ಪರಿಣಮಿಸಿದೆ. ಮಹಾನವಮಿ ಬಯಲಿನ ಬಳಿ ಡಕ್ ನಿರ್ಮಿಸದ ಪರಿಣಾಮ, ಮಳೆ ಬಂದಾಗ ಕೊಳಚೆನೀರು ಮನೆಗಳಿಗೆ ನುಗ್ಗುತ್ತದೆ. ರಸ್ತೆಯ ಎರಡು ಬದಿ ಅಗೆದು ಹಾಗೆಯೇ ಬಿಟ್ಟಿರುವ ಕಾರಣ ವಾರದಲ್ಲಿ 2–3 ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ವಿಸ್ತರಣೆ ವೇಳೆ ಭೂ ಸ್ವಾಧೀನವಾದ ಜಾಗದಲ್ಲಿ ಪರಿಹಾರ ಪಡೆದವರೇ ಅತಿಕ್ರಮಿಸಿ ಶೆಡ್, ಗೂಡಂಗಡಿಗಳನ್ನು ನಿರ್ಮಿಸಿದ್ದಾರೆ. ರಸ್ತೆ ಪಕ್ಕದಲ್ಲಿ ಅಡಿಕೆ ಸಿಪ್ಪೆ ಎಸೆದು, ಬೆಂಕಿ ಹಾಕುವುದರಿಂದ ವಾತಾವರಣ ಕಲುಷಿತಗೊಳ್ಳುತ್ತದೆ’ ಎಂದು ಸ್ಥಳೀಯರು ಆಕ್ಷೇಪಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೆ-ಶಿಪ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪುರಸಭೆ ಸದಸ್ಯರಾದ ಎನ್.ಎಂ.ನಾಗರಾಜ್, ವ್ಯವಸ್ಥಾಪಕ ಹೇಮರಾಜ್, ಕಂದಾಯ ಅಧಿಕಾರಿ ಯೋಗೀಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ನಾಗರಿಕರಾದ ಮೋಹನ್, ರುದ್ರೇಶ್, ಸಂಪಿಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.