ADVERTISEMENT

ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆ: ಡಯಾಲಿಸಿಸ್ ಸೇವೆ; ರೋಗಿಗಳ ಪರದಾಟ

ನಿರ್ವಹಣೆಗೆ ಗುತ್ತಿಗೆ ಖಾಸಗಿ ಕಂಪನಿಗೆ

ಪ್ರಜಾವಾಣಿ ವಿಶೇಷ
Published 21 ಡಿಸೆಂಬರ್ 2020, 4:03 IST
Last Updated 21 ಡಿಸೆಂಬರ್ 2020, 4:03 IST
ಮೂಡಿಗೆರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗಿರುವ ಸುದರ್ಶನ್
ಮೂಡಿಗೆರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗಿರುವ ಸುದರ್ಶನ್   

ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆದಿರುವ ಡಯಾಲಿಸಿಸ್ ಕೇಂದ್ರ ದಲ್ಲಿ ಎಲ್ಲ ರೋಗಿಗಳಿಗೂ ಅಗತ್ಯ ಪ್ರಮಾಣದಲ್ಲಿ ಸೇವೆ ಸಿಗದೇ ಪರದಾಡುವಂತಾಗಿದೆ.

ತಾಲ್ಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. 4 ವರ್ಷಗಳ ಹಿಂದೆ ಎಂಜಿಎಂ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕವನ್ನು ತೆರೆದು, ಅಗತ್ಯ ಉಪಕರಣಗಳನ್ನು ಅಳವಡಿಸಿ ಡಯಾಲಿಸಿಸ್ ಸೇವೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರಾರಂಭದಲ್ಲಿ ಸರ್ಕಾರದ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು. ಪ್ರಸ್ತುತ ಖಾಸಗಿ ಸಂಸ್ಥೆಗೆ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದ್ದು, ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಸೇವೆ ಸಿಗುತ್ತಿಲ್ಲ ಎಂಬುದು ರೋಗಿಗಳ ಸಂಬಂಧಿಕರ ಆರೋಪವಾಗಿದೆ.

‘ಸರ್ಕಾರದಿಂದ ನಿರ್ವಹಣೆ ಮಾಡುವ ವೇಳೆ ಡಯಾಲಿಸಿಸ್ ಸೇವೆಗೆ ಬೇಕಿದ್ದ ಎಲ್ಲಾ ಉಪಕರಣಗಳನ್ನು ಸರ್ಕಾರವೇ ಪೂರೈಸುತ್ತಿತ್ತು. ಆದರೆ, ಖಾಸಗಿ ಸಂಸ್ಥೆಗೆ ವಹಿಸಿದ ಬಳಿಕ ರೋಗಿಗಳೇ ಡಯಾಲಿಸಿಸ್‌ಗೆ ಅಗತ್ಯವಾದ ಕೆಲವು ಉಪಕರಣಗಳನ್ನು ಖರೀದಿಸಬೇಕಿದ್ದು, ಒಂದು ಬಾರಿ ಡಯಾಲಿಸಿಸ್ ನಡೆಸಲು ಸುಮಾರು ₹ 700 ರಿಂದ ₹ 800 ಮೌಲ್ಯದ ವಸ್ತುಗಳನ್ನು ಖರೀದಿಸಿ ನೀಡಬೇಕಿತ್ತು. ಇದನ್ನು ವಿರೋಧಿಸಿ ಹಲವು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕೆಲವು ವಸ್ತುಗಳನ್ನು ಸಂಸ್ಥೆಯು ಪೂರೈಕೆ ಮಾಡುತ್ತಿದ್ದು, ಈಗಲೂ ₹ 200 ರಿಂದ ₹ 300 ಮೌಲ್ಯದ ವಸ್ತುಗಳನ್ನು ಹೊರಗಡೆಯಿಂದ ತಂದು ಕೊಡಬೇಕಿದೆ. ವಸ್ತುಗಳನ್ನು ಖರೀದಿಸಿ ತಂದು ಕೊಟ್ಟರೂ ಅಗತ್ಯ ಪ್ರಮಾಣದಲ್ಲಿ ಸೇವೆ ಸಿಗುತ್ತಿಲ್ಲ’ ಎಂಬುದು ಹಲವು ರೋಗಿಗಳ ಆರೋಪವಾಗಿದೆ.

ADVERTISEMENT

‘ಪತಿಗೆ ಐದು ವರ್ಷಗಳಿಂದಲೂ ಡಯಾಲಿಸಿಸ್ ಮಾಡಿಸುತ್ತಿದ್ದೇವೆ. ಮೊದಲು ಮಣಿಪಾಲದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವು. ಸ್ಥಳೀಯವಾಗಿ ಡಯಾಲಿಸಿಸ್ ಕೇಂದ್ರ ತೆರೆದಿದ್ದು, ಬಹಳಷ್ಟು ಉಪಯುಕ್ತವಾಯಿತು. ಪತಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕು ಎಂದು ತಜ್ಞ ವೈದ್ಯರು ಸೂಚಿಸಿದ್ದಾರೆ. ಎಂಜಿಎಂ ಕೇಂದ್ರದಲ್ಲಿ ಮೊದಲು ಮೂರು ಬಾರಿ ಡಯಾಲಿಸಿಸ್ ಮಾಡುತ್ತಿದ್ದರು. ಆದರೆ, ಕೊರೊನಾ ಪ್ರಾರಂಭವಾದ ಬಳಿಕ ವಾರಕ್ಕೆ ಮೂರು ಬಾರಿ ಸೇವೆ ನೀಡುವುದನ್ನು ಸ್ಥಗಿತಗೊಳಿಸಿದ್ದು, ಗುರುವಾರ ಹಾಗೂ ಶನಿವಾರ ಎರಡು ಬಾರಿ ಮಾತ್ರ ಡಯಾಲಿಸಿಸ್ ಮಾಡುತ್ತಾರೆ. ಶನಿವಾರದಿಂದ ಗುರುವಾರದವರೆಗೂ ನಾಲ್ಕು ದಿನಗಳಲ್ಲಿ ತುಂಬಾನೇ ಅನಾರೋಗ್ಯ ಉಂಟಾಗಿ ಉಸಿರಾಟಕ್ಕೂ ಸಮಸ್ಯೆಯಾಗುತ್ತದೆ. ಅಗತ್ಯ ರೋಗಿಗಳಿಗೆ ಮೂರು ಡಯಾಲಿಸಿಸ್ ಮಾಡಲು ಅವಕಾಶ ಕಲ್ಪಿಸಬೇಕು’ ಎನ್ನುತ್ತಾರೆ ರಾಘಶ್ರೀ.

‘ಕೊರೊನಾಕ್ಕೂ ಪೂರ್ವದಲ್ಲಿ ತಾಲ್ಲೂಕಿನ 25 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಆದರಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಇಬ್ಬರಿಗೆ ಬದಲಿ ಕಿಡ್ನಿ ಅಳವಡಿಸಲಾಗಿದೆ. ಉಳಿದ ಹದಿನೆಂಟು ಮಂದಿ ಮಾತ್ರ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ಕೆಲವರು ವಾರಕ್ಕೆ ಒಂದು ಡಯಾಲಿಸಿಸ್ ಮಾಡಿಸಿಕೊಂಡರೆ, ಮತ್ತೆ ಕೆಲವರು ಎರಡು ಡಯಾಲಿಸಿಸ್ ಮಾಡಿಕೊಳ್ಳುತ್ತಾರೆ. ಕೆಲವೇ ಮಂದಿಗೆ ಮಾತ್ರ ಮೂರು ಡಯಾಲಿಸಿಸ್ ಅಗತ್ಯವಿರುವುದರಿಂದ ಅವರಿಗೆ ಸೇವೆ ನೀಡದಿದ್ದರೆ ಜೀವಕ್ಕೆ ಕುತ್ತಾಗಬಹುದು. ಆದ್ದರಿಂದ ಅಗತ್ಯ ಇರುವವರಿಗೆ ಮೂರು ಡಯಾಲಿಸಿಸ್ ಕಲ್ಪಿಸಬೇಕು’ ಎನ್ನುತ್ತಾರೆ ಡಯಾಲಿಸಿಸ್ ರೋಗಿಯ ಸಂಬಂಧಿ ಪ್ರಸನ್ನ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.