
ಚಿಕ್ಕಮಗಳೂರು: ಕಷಿಯಲ್ಲಿ ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಸುತ್ತಿರುವುದರಿಂದ ಆಹಾರ ವಿಷಮಿಶ್ರಿತವಾಗಿದೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿ ಪದ್ಧತಿಯೊಂದಿಗೆ ಬೆಳೆದ ಸಿರಿಧಾನ್ಯ ಬಳಸುವುದು ಸೂಕ್ತ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಎಐಟಿ ಕಾಲೇಜಿನಲ್ಲಿ ಭಾನುವಾರ ನಡೆದ ಸಿರಿಧಾನ್ಯ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ರಾಮಬಾಣ. ಸಾವಯವ ಕೃಷಿಯಲ್ಲಿ ಬೆಳೆದ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಸಿರಿಧಾನ್ಯ ಬೆಳೆಯಬಹುದು. ಸರ್ಕಾರ ಕೂಡ ಸಿರಿಧಾನ್ಯ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಬರಗಾಲದಲ್ಲೂ ಬೆಳೆಯುವ ಶಕ್ತಿ ಸಿರಿಧಾನ್ಯಗಳಿಗೆ ಇದೆ. ಮಳೆ ಕಡಿಮೆಯಾದರೂ ಸಿರಿಧಾನ್ಯ ಬೆಳೆಯಬಹುದು. ಸಿರಿಧಾನ್ಯಗಳಿಂದ ಮಧುಮೇಹ, ಹೃದಯ ಬೇನೆ ಸೇರಿ ಅನೇಕ ಕಾಯಿಲೆ ತಡೆಯಬಹುದು. ಆದ್ದರಿಂದ ಕೃಷಿ ಕುಟುಂಬದಲ್ಲಿ ಇರುವ ಎಲ್ಲರೂ ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಹೆಚ್ಚು ಒತ್ತುಕೊಡಬೇಕು ಎಂದು ಮನವಿ ಮಾಡಿದರು.
ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಪ್ರಾಕತಿಕ ಸರಪಳಿ ಮನುಷ್ಯ ತುಂಡರಿಸಿದ್ದಾನೆ. ಸ್ವಾವಲಂಬಿ ಆಗಬೇಕಿದ್ದ ರೈತ ಇಂದು ಪರಾವಲಂಬಿಯಾಗಬೇಕಿದೆ. ಎಲ್ಲ ಜೀವಜಂತುಗಳಿಗೂ ಶಕ್ತಿ ಮತ್ತು ಮಿತಿಗಳನ್ನು ಸೃಷ್ಟಿ ಕೊಟ್ಟಿದೆ. ಹುಳ ಹುಪ್ಪಟೆಗಳನ್ನು ಕಪ್ಪೆ ತಿಂದರೆ, ಕಪ್ಪೆ ಹಾವಿಗೆ ಆಹಾರವಾಗಿತ್ತು. ಹಾವು ನವಿಲಿನ ಆಹಾರವಾಗುತ್ತಿತ್ತು. ಆದರೆ, ಭೂಮಿಗೆ ಕ್ರಿಮಿನಾಶಕ ಮತ್ತು ರಾಸಾಯನಿಕ ಸುರಿದಿರುವ ಪರಿಣಾಮ ಇಂತಹ ಪ್ರಾಕೃತಿಕ ಸರಪಳಿಯೇ ತುಂಡಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ ತಾಯಿಯ ಹಾಲು ಕೂಡ ವಿಷವಾಗುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಆದ್ದರಿಂದ ಮತ್ತೆ ಸಹಜ ಕೃಷಿಯತ್ತ ಹೊರಳುವ ಅಗತ್ಯವಿದೆ. ಇಂತಹ ಸಾವಯವ ಕೃಷಿ ಮೇಳಗಳು ರೈತನನ್ನು ಸ್ವಾವಲಂಬಿಯಾಗಿಸಲು ಕೆಲಸ ಮಾಡಲಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಕೃಷಿ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ಕೃಷಿ ಕುಟುಂಬದಲ್ಲೇ ಹುಟ್ಟಿದ್ದರೂ ಇಂದು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಲಾಭದಾಯಕ ಮತ್ತು ನೆಮ್ಮದಿ ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಡಬೇಕಿದೆ’ ಎಂದರು.
ಕೃಷಿ ನಾಶವಾದರೆ ಇಡೀ ದೇಶ, ಮಾನವ ಕುಲ ನಾಶವಾದಂತೆ. ಹೀಗಾಗಿ ಕೃಷಿ ಬದುಕಿಗೆ ಹೆಚ್ಚಿನ ಮಹತ್ವ ಕೊಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಕರಾಳ ದಿನಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಉಪನ್ಯಾಸ ನೀಡಿದರು.
ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ, ರೈತ ಮುಖಂಡ ಬಸವರಾಜಪ್ಪ, ಕಲ್ಮರುಡಪ್ಪ, ಸುರೇಶ್, ಬಾಲಕಷ್ಣ, ಕಷಿ ವಿಜ್ಞಾನಿ ಕಷ್ಣಮೂರ್ತಿ, ರವಿ, ಜಂಟಿ ಕಷಿ ನಿರ್ದೇಶಕ ತಿರುಮಲೇಶ್ ಇದ್ದರು.
ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ ವಸ್ತು ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನದ ಜತೆಗೆ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.