
ಬಾಳೆಹೊನ್ನೂರು: ರೈತರಿಗೆ ಮೊದಲು ಪಂಚಾಯಿತಿಗಳ ಮೂಲಕ ಶಕ್ತಿ ತುಂಬುವ ಕೆಲಸ ಆಗಬೇಕು. ಕೇಂದ್ರ ಸರ್ಕಾರ ನೀಡುವ ಎರಡು ಸಾವಿರ ರೂಪಾಯಿಗೆ ಮರುಳಾಗಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ಸಂಶೋಧನೆಗಳು ಹೇಳಿಕೆಗೆ ಸೀಮಿತವಾಗಬಾರದು. ದೇಶದಲ್ಲಿ ಕೃಷಿಕರು ಹವಾಮಾನ ವ್ಯತ್ಯಾಸ, ಬೆಲೆ ಕುಸಿತದಂತಹ ನಿತ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಾಫಿ ಬೆಳೆ ಕೈಗೆ ಸಿಗದೆ ನಷ್ಟ ಅನುಭವಿಸುತ್ತಾರೆ. ಕಾಫಿ ಬೆಳೆಗಾರರ ಹೃದಯ ವೈಶಾಲ್ಯತೆ ದೊಡ್ಡದು. ಎಲ್ಲರಿಗೂ ಸಹಕಾರ ನೀಡುತ್ತಾರೆ. ಕೈಲಿ ದುಡ್ಡಿದ್ರೆ ಸಾಕು ಎಲ್ಲವನ್ನೂ ಖರ್ಚು ಮಾಡಲು ಮುಂದಾಗುತ್ತಾರೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೋ ಆದೇಶ ತೋರಿಸಿ ಬೆಳೆಗಾರರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಕಾಫಿ ಬೆಳೆಗಾರರು ಎಂದೂ ಕಾಡು ಹಾಳು ಮಾಡಿಲ್ಲ. ಅಧಿಕಾರಿಗಳು ಮಾತ್ರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಸಿ ನೆಟ್ಟ ಲೆಕ್ಕ ತೋರಿಸುತ್ತಾರೆ. ಅದರೆ ಅದು ಹುಡುಕಿದರೂ ಸಿಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳ ಜತೆ ಪ್ರೀಟ್ರೇಡ್ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಫಿಗೂ ಅನುಕೂಲವಾಗಬಹುದು. ಕಾಫಿ ಬೆಳೆಗೆ ಶೇ 3 ರ ಬಡ್ಡಿದರದಲ್ಲಿ ಸಾಲ ನೀಡುವುದು ರಾಜ್ಯ ಸರ್ಕಾರದ ಕೈಯಲ್ಲಿದೆ. ಸರ್ಪೆಸಿ ಕಾಯ್ದೆ, ಪ್ರಾಣಿ ಮತ್ತು ಮಾನವ ಸಂಘರ್ಷ, ಹಾಸನದಲ್ಲಿ ಗೊಬ್ಬರ ತಯಾರಿಕಾ ಕಾರ್ಖಾನೆ ಆರಂಭ ಕುರಿತು ಬೆಳೆಗಾರರ ತಂಡ ದೆಹಲಿಗೆ ಬಂದಲ್ಲಿ ಸಂಬಂದಿಸಿದ ಸಚಿವರ ಜತೆ ಸಭೆ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ನಾನೆಂದೂ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದವನಲ್ಲ. ದೇವರ ಇಚ್ಚೆಯಂತೆ ಆಗಿದ್ದೇನೆ. ಐದು ಬಾರಿ ಕ್ಲಿಷ್ಟಕರ ಘಳಿಗೆ ಎದುರಿಸಿ ಬದುಕಿ ಬಂದಿದ್ದೇನೆ. ಇನ್ನೆಷ್ಟು ದಿನವೋ ಗೊತ್ತಿಲ್ಲ. ಬಹುಶಃ ನನ್ನಿಂದ ಇನ್ನೊಂದಿಷ್ಟು ಉತ್ತಮ ಕಾರ್ಯ ನಡೆಸಲು ದೇವರು ಇಚ್ಛಿಸಿರಬಹುದು ಎಂದು ಭಾವುಕರಾಗಿ ನುಡಿದರು.
2025ರ ಕಾಫಿ ಪೈನ್ ಕಪ್ ಪ್ರಶಸ್ತಿಯನ್ನು ರಜಾಕ್ ಸೇಟ್, ಗ್ರಾಂಜೆ ಎ ಎಸ್ಟೇಟ್ ತಮಿಳುನಾಡು (ಪ್ರಥಮ),ಜೋಕಭ್ ಮೆಮೂನ್, ಭದ್ರಾ ಗ್ರೂಪ್ ಆಫ್ ಎಸ್ಟೇಟ್, ಚಿಕ್ಕಮಗಳೂರು (ದ್ವಿತೀಯ) ಹಾಗೂ ಸಂದೀಪ್ ಮ್ಯಾಥ್ಯೂ ಅನೂಪ್, ಅನುಪಮ ಎಸ್ಟೇಟ್ ನೀಲಗಿರಿ ತಮಿಳುನಾಡು (ತೃತೀಯ) ಹಾಗೂ ಜಿ.ಜಿ.ಪದ್ಮಶ್ರೀ ಮೂಲೆ ಮನೆ ಎಸ್ಟೇಟ್ ಕೂರ್ಗ ನಾಲ್ಕನೇ ಸ್ಥಾನ ಪಡೆದರು.
ಕಾಫಿ ಮಂಡಳಿ ಸಿಇಒ ಕೂರ್ಮಾರಾವ್, ಬೇಲೂರು ಶಾಸಕ ಸುರೇಶ್, ವಿಧಾನಪರಿಷತ್ ಸದಸ್ಯ ಬೋಜೇಗೌಡ, ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ಜಿಲ್ಲೆಯ ಜಿಲ್ಲಾಧಿಕಾರಿ ಎ.ಎಸ್.ದಿನೇಶ್‍ಕುಮಾರ್, ಪಿ.ಎಸ್.ಗಂಗಾಧರ್, ನಿರ್ದೇಧೇಶಕ ಸೆಂಥಿಲ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.