ADVERTISEMENT

ಎರಡು ವರ್ಷದಲ್ಲಿ ಪ್ರತಿ ಗ್ರಾಮಕ್ಕೂ ಕುಡಿವ ನೀರು: ಕೆ.ಎಸ್.ಆನಂದ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 15:26 IST
Last Updated 18 ಫೆಬ್ರುವರಿ 2024, 15:26 IST
ತಾಲ್ಲೂಕಿನ ಪಿ.ಕೋಡಿಹಳ್ಳಿಯಲ್ಲಿ ಸಾರ್ವಜನಿಕ ಸಮುದಾಯ ಭವನಕ್ಕೆ ಶಾಸಕ ಕೆ.ಎಸ್.ಆನಂದ್ ಶಂಕುಸ್ಥಾಪನೆ ನೆರವೇರಿಸಿದರು.
ತಾಲ್ಲೂಕಿನ ಪಿ.ಕೋಡಿಹಳ್ಳಿಯಲ್ಲಿ ಸಾರ್ವಜನಿಕ ಸಮುದಾಯ ಭವನಕ್ಕೆ ಶಾಸಕ ಕೆ.ಎಸ್.ಆನಂದ್ ಶಂಕುಸ್ಥಾಪನೆ ನೆರವೇರಿಸಿದರು.   

ಕಡೂರು: ‘ಮುಂದಿನ ಎರಡು ವರ್ಷಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಗ್ರಾಮಕ್ಕೂ ಭದ್ರಾ ನದಿಯಿಂದ ನೀರು ಒದಗಿಸುವ ಆಶಯ ನನ್ನದು’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲ್ಲೂಕಿನ ಪಿ.ಕೋಡಿಹಳ್ಳಿಯಲ್ಲಿ ಭಾನುವಾರ ಸಾರ್ವಜನಿಕ ಸಮುದಾಯ ಭವನ ಮತ್ತು ಜನಜೀವನ್ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಸಾರ್ವಜನಿಕ ಸಮುದಾಯ ಭವನ ಕಾಮಗಾರಿಗೆ ₹30 ಲಕ್ಷ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ₹10 ಲಕ್ಷ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ ₹20 ಲಕ್ಷ ಅನುದಾನ ಒದಗಿಸಲಾಗಿದೆ. ಬಡ ಜನತೆಗೆ ಮಂಗಳ ಕಾರ್ಯಗಳನ್ನು ಮಾಡಲು ಇದರಿಂದ ಅನುಕೂಲವಾಗಲಿದೆ. ಸುಮಾರು ₹65 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಈ ಗ್ರಾಮ ವ್ಯಾಪ್ತಿಯಲ್ಲಿ ಒದಗಿಸಲಾಗಿದೆ. ನನಗೆ ಅತಿ ಹೆಚ್ಚು ಮತ ನೀಡಿದ ಈ ಗ್ರಾಮದ ಸಹಕಾರ ಮರೆಯಲಾರೆ’ ಎಂದರು.

ADVERTISEMENT

ತಾಲ್ಲೂಕಿನ ಎಲ್ಲ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರೊದಗಿಸುವ ₹90 ಕೋಟಿ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದೆ. ಹಳೆಯದಾಗಿರುವ ಪೈಪ್ ಲೈನ್ ಗಳನ್ನು ಬದಲಾಯಿಸಿ ಭದ್ರಾ  ನದಿಯಿಂದ ಶುದ್ಧ ಕುಡಿಯುವ ನೀರು ದೊರಕಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಕೋಡಿಹಳ್ಳಿ ಮಹೇಶ್ವರಪ್ಪ, ದೊಣ್ಣೆಕೋರನಹಳ್ಳಿ ಉಮೇಶ್, ಪಿಎಸೈ ರಂಗನಾಥ್, ಪಿಡಿಒ ಶುಭಲಕ್ಷ್ಮಿ, ಕೆ.ಇ.ಜಯಣ್ಣ, ಗುಮ್ಮನಹಳ್ಳಿ ಅಶೋಕ್, ಯಗಟಿ ಗೋವಿಂದಪ್ಪ, ಸಿದ್ದರಾಮನಹಳ್ಳಿ ಆಬಿದ್ ಬಾಷಾ, ಸ್ಥಳದಾನಿ ಕೆ.ಎಂ.ಈಶ್ವರಪ್ಪ ಇದ್ದರು.

ಮುಜರಾಯಿ ಇಲಾಖೆಯಿಂದ ತಾಲ್ಲೂಕಿಗೆ ₹5 ಕೋಟಿ ಅನುದಾನ ದೊರೆತಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿರುವ ಎಲ್ಲ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಈ ಹಣ ವಿನಿಯೋಗವಾಗಲಿದೆ. ಕಾಂಗ್ರೆಸ್ ಬಂದರೆ ಅನ್ನ ತಿನ್ನುತ್ತೇವೆ.ಬಿಜೆಪಿ ಬಂದರೆ ಮಣ್ಣು ತಿಂತೀವಿ ಎಂಬ ಘೋಷಣೆಯನ್ನು ಇಲ್ಲಿ ಮಕ್ಕಳು ಕೂಗಿದರು.ಬಹುಶಃ ಇದು ಪ್ರಸ್ತುತ ಸರ್ಕಾರದ ಬಗ್ಗೆ ಅತ್ಯುತ್ತಮ ವಿಶ್ಲೇಷಣೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.