ADVERTISEMENT

ಜಮೀನು ಇಲ್ಲದಿರುವವರ ಖಾತೆಗೆ ಹಣ ಜಮೆ!

2016ನೇ ಸಾಲಿನ ಬರಪರಿಹಾರ; ಸಮಗ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 13:03 IST
Last Updated 7 ಡಿಸೆಂಬರ್ 2018, 13:03 IST
ಪ್ರದೀಪ್‌ ಆಚಾರ್‌
ಪ್ರದೀಪ್‌ ಆಚಾರ್‌   

ಚಿಕ್ಕಮಗಳೂರು: ‘ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ 2016ನೇ ಸಾಲಿನಲ್ಲಿ ಬರ ಪರಿಹಾರದ ಹಣವನ್ನು ಜಮೀನು ಇಲ್ಲದಿರುವ ಕೆಲವರ ಖಾತೆಗೆ ಜಮೆ ಮಾಡಲಾಗಿದ್ದು, ಹಣ ಲಪಟಾಯಿಸಲು ಈ ಪಿತೂರಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಕಡೂರಿನ ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಕಾರ್ಯದರ್ಶಿ ಪ್ರದೀಪ್‌ ಆಚಾರ್‌ ಇಲ್ಲಿ ಶುಕ್ರವಾರ ಒತ್ತಾಯಿಸಿದರು.

‘ನನಗೆ ಯಾವುದೇ ಜಮೀನು ಇಲ್ಲ. ಆದರೂ, ಕಡೂರಿನ ಕರ್ಣಾಟಕ ಬ್ಯಾಂಕ್‌ ಶಾಖೆಯಲ್ಲಿನ ನನ್ನ ಎಸ್‌.ಬಿ.ಖಾತೆಗೆ (ಖಾತೆ ಸಂಖ್ಯೆ 4422500100330901) ಬರ ಪರಿಹಾರದ ಹಣ ಜಮೆಯಾಗಿದೆ. 2016ಜುಲೈ 18ರಂದು ₹ 4367 ಹಾಗೂ ಆಗಸ್ಟ್‌ 2ರಂದು ₹ 950 ಜಮೆಯಾಗಿದೆ. ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಚಿಕ್ಕಂಗಳ ವೃತ್ತದ ಗ್ರಾಮಲೆಕ್ಕಿಗ ಬಿ.ಚಂದ್ರಶೇಖರ ಆಚಾರ್‌, ರಾಜಸ್ವ ನಿರೀಕ್ಷಕ ಕೆ.ಎಂ.ಪ್ರಸನ್ನ, ಮಧ್ಯವರ್ತಿ ವಾಸುದೇವ ಆಚಾರ್‌ ಶಾಮೀಲಾಗಿ ಹಣ ಲಪಟಾಯಿಸಲು ಈ ಪಿತೂರಿ ಮಾಡಿದ್ದಾರೆ. ತಹಶೀಲ್ದಾರ್‌, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಸಕ ಸಹಿತ ಆರು ಮಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಿಸಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಂದ್ರಶೇಖರ ಆಚಾರ್‌, ಕೆ.ಎಂ.ಪ್ರಸನ್ನ, ವಾಸುದೇವ ಆಚಾರ್‌ ವಿರುದ್ಧ ಇನ್ನು ಎಫ್‌ಐಆರ್‌ ದಾಖಲಿಸಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸುತ್ತೇವೆ. ಕಡೂರು ತಾಲ್ಲೂಕಿನಲ್ಲಿ ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮಾಡಿಸಲು ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಜಮೀನು ಇಲ್ಲದಿರುವ ಐವರ ಖಾತೆಗೆ ಬರಪರಿಹಾರದ ₹14,349 ಜಮೆಯಾಗಿದೆ. ಖಾತೆಗೆ ಜಮೆಯಾಗಿರುವ ಹಣ ಕೊಡುವಂತೆ ಪುಸಲಾಯಿಸಿದರು. ಬೆದರಿಕೆಯನ್ನೂ ಒಡ್ಡಿದರು. ಅದಕ್ಕೆ ನಾವು ಮಣಿದಿಲ್ಲ. ತಾಲ್ಲೂಕಿನ ವಿವಿಧೆಡೆ ಇದೇ ರೀತಿ ಮಾಡಿರುವ ಗುಮಾನಿ ಇದೆ’ ಎಂದು ಹೇಳಿದರು.

‘ಬರ ಪರಿಹಾರದಲ್ಲಿ ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ. ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕ, ಅಧಿಕಾರಿಗಳು, ಮಧ್ಯವರ್ತಿ ಶಾಮೀಲಾಗಿ ಜಮೀನು ಇಲ್ಲದಿರುವವರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ್ದಾರೆ. ಜಮೀನು ಇಲ್ಲದಿರುವವರ ಖಾತೆಗೆ ಹಣ ಜಮೆ ಮಾಡಿಸಿ, ನಂತರ ಅವರಿಂದ ವಸೂಲಿ ಮಾಡುವ ತಂತ್ರ ಹೆಣೆದಿದ್ದಾರೆ’ ಎಂದು ವೇದಿಕೆ ಉಪಾಧ್ಯಕ್ಷ ಭದ್ರರಾಜ್‌ ದೂಷಿಸಿದರು.

ವೇದಿಕೆ ಪದಾಧಿಕಾರಿಗಳಾದ ಸುಂದರೇಶ್‌, ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.