ADVERTISEMENT

ಕೊಟ್ಟಿಗೆಹಾರ | ಬತ್ತುತ್ತಿರುವ ಅಂತರ್ಜಲ; ಜನರಲ್ಲಿ ಆತಂಕ

ಹೆಚ್ಚುತ್ತಿರುವ ಬಿಸಿಲಿನ ಝಳ, ಕುಡಿಯುವ ನೀರಿಗೆ ಆಪತ್ತು ಎದುರಾಗುವ ಸಾಧ್ಯತೆ

ಅನಿಲ್ ಮೊಂತೆರೊ
Published 1 ಏಪ್ರಿಲ್ 2024, 6:05 IST
Last Updated 1 ಏಪ್ರಿಲ್ 2024, 6:05 IST
ಬಣಕಲ್‌ನಲ್ಲಿ ಸಂಗಮಿಸುವ ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ
ಬಣಕಲ್‌ನಲ್ಲಿ ಸಂಗಮಿಸುವ ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ   

ಕೊಟ್ಟಿಗೆಹಾರ: ಬಣಕಲ್, ತರುವೆ, ಕೊಟ್ಟಿಗೆಹಾರ, ಬಾಳೂರು ಸುತ್ತಮುತ್ತ ತಾಪಮಾನ ಹೆಚ್ಚುತ್ತಿದ್ದು ಸಕಾಲದಲ್ಲಿ ಮಳೆ ಆಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಆತಂಕ ಕಾಡತೊಡಗಿದೆ.

ಕಳೆದ ವರ್ಷ ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿತ್ತು. ಜಾವಳಿಯಿಂದ ಹರಿದು ಬರುವ ಹೇಮಾವತಿ ನದಿ ಒಡಲು ಈಗಾಗಲೇ ಬರಿದಾಗುತ್ತಾ ಬರುತ್ತಿದೆ. ಸುತ್ತಮುತ್ತಲ ಕೆರೆಗಳಲ್ಲಿ ಜಲಮಟ್ಟ ಇಳಿಕೆಯಾಗಿದೆ.

‘ಬಣಕಲ್‌ನ ಹೆಗ್ಗುಡ್ಲುನಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಆ ಸಮಸ್ಯೆ ಬಗೆಹರಿಸಲಾಗಿದೆ. ಬಣಕಲ್‌ನಲ್ಲಿ ಎರಡು ದಿನಕ್ಕೊಮ್ಮೆ ಗ್ರಾಮಗಳಿಗೆ ನೀರು ಬಿಡಲಾಗುತ್ತದೆ. ತರುವೆ ಗ್ರಾಮದ ಕೋಡೆಬೈಲ್ ಭಾಗದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿದೆ. ಪಟಗುಣಿಯಿಂದ ಬರುವ ನೈಸರ್ಗಿಕ ನೀರಿನ ಮಟ್ಟ ಇಳಿದಿದೆ. ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೊಂದರೆ ಆಗಲಿದೆ’ ಎಂದು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಎಂ.ಸತೀಶ್ ಹೇಳಿದರು.

ADVERTISEMENT

ಮಲೆನಾಡಿನಲ್ಲಿ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ಜಲಮಟ್ಟ 600 ಅಡಿಗೂ ಕೆಳಕ್ಕೆ ಕುಸಿದಿದೆ. ಅಡಿಕೆ, ತೆಂಗು, ಕಾಫಿ, ಕಾಳುಮೆಣಸು, ಬಾಳೆ ಮತ್ತಿತರ ವಾಣಿಜ್ಯ ಬೆಳೆಗೆ ನೀರು ಹಾಯಿಸಲು ಆಗುತ್ತಿಲ್ಲ. ಆದ್ದರಿಂದ ಗಿಡಗಳು ಒಣಗುತ್ತಿವೆ. ಮಳೆ ಸುರಿಯುವ ನಿರೀಕ್ಷೆ ಇದ್ದು ಮಳೆ ಆಗದಿದ್ದರೆ ಬರ ಖಚಿತ ಎನ್ನುತ್ತಾರೆ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಇರ್ಫಾನ್.

ಬಣಕಲ್ ಸುತ್ತಮುತ್ತ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಆಗಲಿದೆ. ಸಮಸ್ಯೆ ಎದುರಾದರೆ ಜಿಲ್ಲಾಡಳಿತದ ಗಮನಕ್ಕೆ ತಂದು ಸರಬರಾಜಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಬಣಕಲ್ ಪಿಡಿಒ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.