ADVERTISEMENT

ಭಕ್ತ ಸಾಗರದ ನಡುವೆ ದುರ್ಗಾಂಬ ರಥೋತ್ಸವ

ಅಂತರಘಟ್ಟೆ: ಎಲ್ಲೆಡೆ ಭಕ್ತರ ಸಂಭ್ರಮ, ಧಾರ್ಮಿಕ ವಿದಿವಿಧಾನಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:11 IST
Last Updated 1 ಫೆಬ್ರುವರಿ 2026, 7:11 IST
ಕಡೂರು ತಾಲ್ಲೂಕು ಅಂತರಘಟ್ಟೆಯ ಶ್ರೀ ದುರ್ಗಾಂಬ ರಥೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಶನಿವಾರ ನೆರವೇರಿತು
ಕಡೂರು ತಾಲ್ಲೂಕು ಅಂತರಘಟ್ಟೆಯ ಶ್ರೀ ದುರ್ಗಾಂಬ ರಥೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಶನಿವಾರ ನೆರವೇರಿತು   

ಕಡೂರು: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕಡೂರು ತಾಲ್ಲೂಕು ಅಂತರಘಟ್ಟೆಯ ಶ್ರೀದುರ್ಗಾಂಬ ದೇವಿಯ ರಥೋತ್ಸವ ಶನಿವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಿತು.

ರಥೋತ್ಸವದ ಪ್ರಯುಕ್ತ ಶುಕ್ರವಾರ ಅಮ್ಮನವರ ಮೂಲಮೂರ್ತಿಗೆ ಮಹಾಭಿಷೇಕ, ಆಭರಣ ಮತ್ತು ಪುಷ್ಪಗಳಿಂದ ಅಲಂಕಾರ, ಮಹಾಮಂಗಳಾರತಿ ನಡೆಸಲಾಯಿತು. ರಾತ್ರಿ ಗ್ರಾಮದ ಬೀದಿಗಳಲ್ಲಿ ಜಾನಪದ ವಾದ್ಯಗಳು, ಮಂಗಳವಾದ್ಯಗಳ ನಡುವೆ ತೆಲುಗುಗೌಡ ಸಮುದಾಯದವರಿಂದ ಉತ್ಸವ ಮೂರ್ತಿಗಳ ಮೆರವಣಿಗೆ ಬಳಿಕ ಉಕ್ತ ಹೋಮಗಳು ಮೊದಲಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ಪ್ರಾಕಾರೋತ್ಸವ ನಡೆಸಿದ ಬಳಿಕ ದೇವಿಯವರ ಉತ್ಸವ ಮೂರ್ತಿಯನ್ನು ವಾದ್ಯಮೇಳಗಳ ನಡುವೆ ಕರೆತಂದು, ಪುಷ್ಪಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾಮಂಗಳಾರತಿ ಸಮರ್ಪಣೆ ಬಳಿಕ, ಭಕ್ತರು ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಅಂತರಘಟ್ಟಮ್ಮನವರಿಗೆ ಜೈ.... ದುರ್ಗಾಂಬ ದೇವಿಗೇ ಜೈ... ಎಂಬ ಉದ್ಘೋಷಗಳ ನಡುವೆ ರಥವನ್ನು ಎಳೆದರು. ಭಕ್ತರು ರಥವನ್ನು ಎಳೆಯುತ್ತಿದ್ದರು ರಥೋತ್ಸವಕ್ಕೆ ಸೇರಿದ್ದವರು ರಥಕ್ಕೆ ಬಾಳೆಹಣ್ಣು, ಕಿತ್ತಲೆಹಣ್ಣು, ಕೋಳಿಗಳನ್ನೂ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಪ್ರಾರ್ಥಿಸಿದರು.

ADVERTISEMENT

ರಥೋತ್ಸವದ ಬಳಿಕ ದೇವಿಯವರ ಮೂಲಸ್ಥಾನದ ದರ್ಶನಕ್ಕೆ ವೃದ್ಧರು, ಅಂಗವಿಕಲರು, ಗರ್ಭಿಣಿಯರು ಮೊದಲಾದವರಿಗೆ ವಿಶೇಷ ಸರತಿ ಮಾಡಲಾಗಿತ್ತು. ಬಂದೋಬಸ್ತ್‌ನಲ್ಲಿ ಕಡೂರು ತಾಲ್ಲೂಕು ಮತ್ತು ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ 250ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ, ಅಂತರಘಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ನಿಯೋಜಿಸಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ತುರ್ತು ಸಂದರ್ಭದಲ್ಲಿ ಗಾಯಾಳುಗಳನ್ನು ಸಾಗಿಸಲು 5 ಆಂಬುಲೆನ್ಸ್‌ಗಳು ಸಜ್ಜಾಗಿದ್ದವು.

8 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ತಿಂಡಿ-ತಿನಿಸುಗಳು, ಆಟೋಟಗಳ ವ್ಯಾಪಾರ ಜೋರಾಗಿ ನಡೆದಿತ್ತು. ಶನಿವಾರ ಸಂಜೆ ದೇವಿಯವರ ರಥಾವರೋಹಣದ ಬಳಿಕ ಹಣ್ಣಿನ ಸೇವೆ ನಡೆಸಿ ಗುಡಿದುಂಬಿಸಲಾಯಿತು. ಭಾನುವಾರ (ಫೆ.1) ಸಂಜೆ ಅಶ್ವಾರೋಹಣೋತ್ಸವ, ಸೋಮವಾರ (ಫೆ.2) ಅಮ್ಮನವರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಮಂಗಳವಾರ (ಫೆ.3) ಅವಭೃತ, ಅಚ್ಚಂದ ಸೇವೆ, ಧ್ವಜಾವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಅಂತರಘಟ್ಟೆಯ ದುರ್ಗಾಂಬ ದೇವಿಯವರನ್ನು ರಥಾರೋಹಣಕ್ಕೂ ಮುನ್ನ ಪ್ರಾಕಾರೋತ್ಸವ ನೆರವೇರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.