ADVERTISEMENT

ಶ್ರೀರಾಮ ಸೇನೆ: ದತ್ತಮಾಲಾ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 14:33 IST
Last Updated 6 ಅಕ್ಟೋಬರ್ 2019, 14:33 IST
ಚಿಕ್ಕಮಗಳೂರಿನಲ್ಲಿ ಶಂಕರಮಠದ ರಾಮಕೃಷ್ಣ ಅವರು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಅವರಿಗೆ ದತ್ತಮಾಲಾ ಧಾರಣೆ ಮಾಡಿದರು.
ಚಿಕ್ಕಮಗಳೂರಿನಲ್ಲಿ ಶಂಕರಮಠದ ರಾಮಕೃಷ್ಣ ಅವರು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಅವರಿಗೆ ದತ್ತಮಾಲಾ ಧಾರಣೆ ಮಾಡಿದರು.   

ಚಿಕ್ಕಮಗಳೂರು: ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ನಿಮಿತ್ತ ನಗರದ ಬಸವನಹಳ್ಳಿಯ ಶಂಕರಮಠದಲ್ಲಿ ಭಾನುವಾರ ದತ್ತಮಾಲಾ ಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌

ಮಠದ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಮಾಲೆಕೈಂಕರ್ಯ ಆರಂಭವಾಯಿತು. ಕೇಸರಿ ಪಂಚೆ, ಶಲ್ಯ ಧರಿಸಿದ್ದ 50ಕ್ಕೂ ಹೆಚ್ಚು ಭಕ್ತರು ದತ್ತಾತ್ರೇಯ ಭಾವಚಿತ್ರದ ಮುಂದೆ ಮಾಲೆ ಧರಿಸಿದರು. ದತ್ತಾತ್ರೇಯ ಸ್ವಾಮಿ ನಾಮಸ್ಮರಣೆ, ಭಜನೆ ನಡೆಯಿತು.
ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುವರು. ಎಂಟು ದಿನಗಳು ವೃತಾಚರಣೆ ಮಾಡುವರು. ಮಾಲಾಧಾರಿಗಳು ಪಾದರಕ್ಷೆ ಧರಿಸುವುದಿಲ್ಲ. ಬೆಳಿಗ್ಗೆ, ಸಂಜೆ ಸ್ನಾನ ಮಾಡಿ, ದತ್ತಾತ್ರೇಯ ಪೂಜೆ, ಸ್ಮರಣೆ ಮಾಡುವರು ಎಂದರು.

‘ಇದೇ 11ರಂದು ನಗರದಲ್ಲಿ ದತ್ತಮಾಲಾಧಾರಿಗಳು ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸುವರು.13ರಂದು ಶೋಭಾಯಾತ್ರೆ ನಡೆಯಲಿದೆ. ಭಕ್ತರು ದತ್ತ ವಿಗ್ರಹವನ್ನು ಸಂಘಟನೆಗೆ ದಾನ ನೀಡಿದ್ದಾರೆ. ಅದನ್ನು ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ದತ್ತಪಿಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಾಗುವುದು’ಎಂದರು.ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಮಹೇಶ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.