ADVERTISEMENT

ಚಿಕ್ಕಮಗಳೂರು | ಬಾನಹಳ್ಳಿಯಲ್ಲಿ ಬೀಡು ಬಿಟ್ಟ ಕಾಡಾನೆಗಳು: ಕಾಡಿಗೆ ಓಡಿಸಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 16 ಮೇ 2020, 17:15 IST
Last Updated 16 ಮೇ 2020, 17:15 IST
ಬಣಕಲ್ ಸಮೀಪದ ಬಾನಹಳ್ಳಿಯಲ್ಲಿ ಎರಡು ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟಲು ಹರಸಾಹಸ ಪಟ್ಟರು.
ಬಣಕಲ್ ಸಮೀಪದ ಬಾನಹಳ್ಳಿಯಲ್ಲಿ ಎರಡು ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟಲು ಹರಸಾಹಸ ಪಟ್ಟರು.   

ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ಬಾನಹಳ್ಳಿಯಲ್ಲಿ ಎರಡು ಕಾಡಾನೆಗಳು ಬೀಡು ಬಿಟ್ಟಿದ್ದು, ಅದನ್ನು ಓಡಿಸಲು ಅರಣ್ಯ ಸಿಬ್ಬಂದಿ ಹಾಗೂ ಬಾನಹಳ್ಳಿಯ ಸುತ್ತಮುತ್ತಲ ಗ್ರಾಮಸ್ಥರು ಹರಸಾಹಸ ಪಟ್ಟರು.

ಗುರುವಾರ ಸಾರಗೋಡು ಅರಣ್ಯ ಭಾಗದಿಂದ ಬಾನಹಳ್ಳಿ ಗ್ರಾಮಕ್ಕೆ ಎರಡು ಕಾಡಾನೆಗಳು ಲಗ್ಗೆಯಿಟ್ಟಿವೆ. ಗ್ರಾಮಸ್ಥರಾದ ಸುಂದರೇಶ ಗೌಡ, ಬಗ್ಗಸಗೋಡು ಮಂಜುನಾಥ್ ಮತ್ತಿತರ ತೋಟದಲ್ಲಿ ಸುತ್ತಾಡಿ ಕಾಫಿ ಬೆಳೆ, ಕಾಳು ಮೆಣಸು, ಅಡಿಕೆಮರ ಎಳೆದು ಹಾಕಿ ತುಳಿದು ನಾಶ ಮಾಡಿವೆ. ಬೈನೆ ಮರಗಳನ್ನು ಪುಡಿ ಮಾಡಿವೆ. ಕಾಡಾನೆಗಳಿಂದ ಪ್ರತಿವರ್ಷವೂ ಬೆಳೆ ನಾಶವಾಗುತ್ತಿದ್ದು, ಕಾಡಾನೆ ಕಾಟದಿಂದ ಗ್ರಾಮದ ಜನರು ಹೈರಾಣಾಗಿದ್ದಾರೆ.

ಕಾಡಾನೆಗಳು ಬಾನಹಳ್ಳಿ ಗ್ರಾಮಕ್ಕೆ ಬಂದ ವಿಷಯ ತಿಳಿದ ಉಪವಲಯ ಅರಣ್ಯಾಧಿಕಾರಿ ಉಮೇಶ್, ರಮೇಶ್, ಕುಮಾರ್, ಅರಣ್ಯ ರಕ್ಷಕರಾದ ನಾಗರಾಜ್, ಮೋಸಿನ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಕೈಜೋಡಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಕಾಡಾನೆಯನ್ನು ಸಾರಗೋಡು ಅರಣ್ಯಕ್ಕೆ ಅಟ್ಟಲು ಹರಸಾಹಸಪಟ್ಟರು.

ADVERTISEMENT

ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ: ಪ್ರತಿವರ್ಷವೂ ಕಾಡಾನೆಗಳು ಬಂಕೇನ ಹಳ್ಳಿ, ಬಾನಹಳ್ಳಿ, ಕೂಡಹಳ್ಳಿ, ಬಗ್ಗಸಗೋಡು, ಕೆಂಜಿಗೆ ಭಾಗದಲ್ಲಿ ಸಂಚರಿಸುತ್ತಿದ್ದು, ಕಾಫಿ ಮತ್ತಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಈ ಸಮಯದಲ್ಲಿ ಫಸಲನ್ನು ತುಳಿದು ಹಾಕಿ ತುಂಬಾ ನಷ್ಟ ಮಾಡುತ್ತಿವೆ. ಇನ್ನು ಈ ಹಿಂದೆ ಕಾಡಾನೆಯಿಂದ ಪ್ರಾಣಹಾನಿಯೂ ಸಂಭವಿಸಿದೆ. ಕಾಡಾನೆ ಓಡಿಸುವುದಕ್ಕಿಂತ ಕಾಡಾನೆ ಸ್ಥಳಾಂತರಗೊಳಿಸಬೇಕೆಂದು ಬಾನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.