ADVERTISEMENT

ಕಾಡಾನೆ ದಾಳಿ: ಗೇಟ್, ತಡೆ ಬೇಲಿ ಮುರಿದು ಹಾನಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 12:45 IST
Last Updated 1 ಅಕ್ಟೋಬರ್ 2019, 12:45 IST
ಮೂಡಿಗೆರೆ ತಾಲ್ಲೂಕಿನ ಪಟ್ಟದೂರು ಗ್ರಾಮದ ಬಳಿ ಮಂಗಳವಾರ ಕಾಡಾನೆಗಳು ಡಿ.ಎಲ್. ಅಶೋಕ್ ಕುಮಾರ್ ಅವರ ಮನೆಯ ಕಬ್ಬಿಣದ ತಡೆಬೇಲಿಯನ್ನು ಮುರಿದು ಹಾನಿಗೊಳಿಸಿದೆ.
ಮೂಡಿಗೆರೆ ತಾಲ್ಲೂಕಿನ ಪಟ್ಟದೂರು ಗ್ರಾಮದ ಬಳಿ ಮಂಗಳವಾರ ಕಾಡಾನೆಗಳು ಡಿ.ಎಲ್. ಅಶೋಕ್ ಕುಮಾರ್ ಅವರ ಮನೆಯ ಕಬ್ಬಿಣದ ತಡೆಬೇಲಿಯನ್ನು ಮುರಿದು ಹಾನಿಗೊಳಿಸಿದೆ.   

ಮೂಡಿಗೆರೆ: ತಾಲ್ಲೂಕಿನ ಮೂಲರಹಳ್ಳಿ ಭಾಗದಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಮಂಗಳವಾರ ಮುಂಜಾನೆ ಪಟ್ಟದೂರು ಗ್ರಾಮದಲ್ಲಿ ಕಬ್ಬಿಣದ ಗೇಟ್, ತಡೆಬೇಲಿಯನ್ನು ಮುರಿದು ದಾಂಧಲೆ ನಡೆಸಿವೆ.

ಮಂಗಳವಾರ ಮುಂಜಾನೆ ದಾಳಿ ನಡೆಸಿರುವ ಒಂಟಿ ಸಲಗವು, ಪಟ್ಟದೂರು ಗ್ರಾಮದ ಚಟಗಲ್ ಎಸ್ಟೇಟಿನ ಡಿ.ಎಲ್. ಅಶೋಕ್ ಕುಮಾರ್ ಎಂಬುವವರ ಮನೆ ಮುಂಭಾಗದ ಗೇಟ್, ತಡೆಬೇಲಿಯನ್ನು ಮುರಿದು ತೋಟದೊಳಗೆ ಪ್ರವೇಶಿಸಿದೆ. ತೋಟದಲ್ಲಿದ್ದ ಕಾಫಿ, ಅಡಿಕೆ, ಬಾಳೆ, ಏಲಕ್ಕಿ ಬೆಳೆಯನ್ನು ತುಳಿದು ನಾಶಗೊಳಿಸಿದ್ದು, ಎರಡು ಗಂಟೆಗೂ ಅಧಿಕ ಕಾಲ ಕಾಫಿ ತೋಟದೊಳಗೆ ಸಂಚರಿಸಿ ನಷ್ಟ ಉಂಟು ಮಾಡಿದೆ.

‘ಸುತ್ತಮುತ್ತಲ ಗ್ರಾಮದಲ್ಲಿ ಒಂಟಿ ಸಲಗದ ದಾಳಿಯು ಮಿತಿಮೀರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ತಿರುಗಾಡಲು ಭಯ ಪಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ದಾಳಿ ನಡೆಸುತ್ತಿದ್ದ ಕಾಡಾನೆಗಳು ಈಗ ಹಗಲಿನಲ್ಲಿಯೇ ಮನೆ ಬಾಗಿಲಿಗೆ ಬರ ತೊಡಗಿದ್ದು, ಕಾಫಿ ತೋಟಗಳಲ್ಲಿ, ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಹಗಲಿನಲ್ಲಿ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುವುದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡುವುದೇ ದುಸ್ತರವಾಗಿದೆ’ಎನ್ನುತ್ತಾರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್.

ADVERTISEMENT

ಕಾಡಾನೆಗಳು ಒಂದು ಬಾರಿ ದಾಳಿ ನಡೆಸಿದರೆ ಕನಿಷ್ಟ 50 ರಿಂದ 60 ಕಾಫಿ ಗಿಡಗಳು ನಾಶವಾಗುತ್ತವೆ. ಫಸಲು ಕೊಡುವ ಗಿಡಗಳು ನಾಶವಾದರೆ ಮತ್ತೆ ಬೆಳೆಯಲು ಏಳೆಂಟು ವರ್ಷಗಳೇ ಬೇಕಾಗುತ್ತದೆ. ಕಾಡಾನೆಗಳು ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಗದ್ದೆಗಳಲ್ಲಿ ಭತ್ತದ ಪೈರೆಲ್ಲವೂ ನಾಶವಾಗಿದ್ದರೆ, ಕಾಫಿ ತೋಟಗಳು ಬಯಲಾಗಿ ಪರಿಣಮಿಸಿವೆ. ಕಾಡಾನೆ ದಾಳಿಯನ್ನು ಕೂಡಲೇ ನಿಯಂತ್ರಿಸದಿದ್ದರೆ ಈ ಭಾಗದ ಕೃಷಿ ಕಾರ್ಮಿಕರು ಬೆಳೆಯಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದಿ ಹೇಳಿದ್ದಾರೆ.

ಮೂಲರಹಳ್ಳಿ, ಕೊಟ್ರಕೆರೆ, ಭೈರಾಪುರ, ಪಟ್ಟದೂರು, ಗುತ್ತಿ, ಹೆಸಗೋಡು ಮುಂತಾದ ಭಾಗಗಳಲ್ಲಿ ಕಾಡಾನೆ ದಾಳಿಯು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು, ಗ್ರಾಮಸ್ಥರು ಹಗಲಿನಲ್ಲಿಯೂ ಜೀವಭಯದಿಂದ ಓಡಾಡುವಂತಾಗಿದೆ. ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.