ADVERTISEMENT

ಕಾಡಾನೆ ಉಪಟಳ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು, ಖಾಂಡ್ಯ ಬಂದ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:52 IST
Last Updated 28 ಜುಲೈ 2025, 5:52 IST
<div class="paragraphs"><p>ಕಾಡಾನೆ ಉಪಟಳ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು, ಖಾಂಡ್ಯ ಬಂದ್</p></div>

ಕಾಡಾನೆ ಉಪಟಳ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು, ಖಾಂಡ್ಯ ಬಂದ್

   

ಬಾಳೆಹೊನ್ನೂರು(ಚಿಕ್ಕಮಗಳೂರು): ಕಾಡಾನೆ ಉಪಟಳ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು, ಖಾಂಡ್ಯದಲ್ಲಿ ಸ್ಥಳೀಯರು ಸೋಮವಾರ ಸ್ವಯಂ ಪ್ರೇರಿತ ಬಂದ್ ನಡೆಸುತ್ತಿದ್ದು, ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಬಾಳೆಹೊನ್ನೂರು, ಖಾಂಡ್ಯ, ಹುಯಿಗೇರೆ, ದೇವದಾನ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಲಾಗುತ್ತಿದೆ. ಮಲೆನಾಡು ಹಿತರಕ್ಷಣಾ ಸಮಿತಿ, ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ, ಮಲೆನಾಡು ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.

ADVERTISEMENT

ಬಾಳೆಹೊನ್ನೂರಿನಲ್ಲಿ ಶಾಲಾ- ಕಾಲೇಜುಗಳನ್ನು ಸ್ಥಳೀಯರು ಬಂದ್ ಮಾಡಿಸಿದ್ದಾರೆ. ವಾಹನ ಸಂಚಾರ ಸಂಚಾರವನ್ನೂ ಬಂದ್ ಮಾಡಲಾಗಿದೆ. ಇದರಿಂದ‌ ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.

ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಕೂಡಲೇ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದು, 'ಹುಯಿಗೇರೆ, ದೇವದಾನ, ಅಂಡವಾನಿ, ಬನ್ನೂರು ಕಸ್ಕೆಮನೆ, ನೇಮನಹಳ್ಳಿ, ಹಲಸೂರು ಸುತ್ತಮುತ್ತ ಪ್ರದೇಶಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಇಬ್ಬರ ಸಾವಿಗೆ ಕಾರಣವಾಗಿರುವ ಎರಡು ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ‌ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದು, ಅದರಂತೆ ಸಕ್ರೆಬೈಲು ಆನೆ ಬಿಡಾರದಿಂದ ಕುಮ್ಕಿ ಆನೆಗಳನ್ನು ಕರೆತಂದು ಎರಡು ಪುಂಡನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಇಂದಿನಿಂದಲೇ(ಸೋಮವಾರ) ಆರಂಭಿಸಲಾಗುವುದು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.