ADVERTISEMENT

ಆನೆ ದಾಳಿಯಿಂದ ಕಾರ್ಮಿಕ ಮಹಿಳೆ ಮೃತ್ಯು | ರೊಚ್ಚಿಗೆದ್ದ ಜನ: ರಸ್ತೆ ತಡೆದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:51 IST
Last Updated 25 ಜುಲೈ 2025, 2:51 IST
ಬಾಳೆಹೊನ್ನೂರು ಸಮೀಪದ ಬನ್ನೂರು ಬಳಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಮೃತಪಟ್ಟಿರುವುದನ್ನು ಖಂಡಿಸಿ, ವಿವಿಧ ಸಂಘಟನೆಗಳ ಸದಸ್ಯರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು
ಬಾಳೆಹೊನ್ನೂರು ಸಮೀಪದ ಬನ್ನೂರು ಬಳಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಮೃತಪಟ್ಟಿರುವುದನ್ನು ಖಂಡಿಸಿ, ವಿವಿಧ ಸಂಘಟನೆಗಳ ಸದಸ್ಯರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು   

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಬನ್ನೂರಿನಲ್ಲಿ ಆನೆ ದಾಳಿಯಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ಅನಿತಾ (24) ಮೃತಪಟ್ಟ ಘಟನೆ ಖಂಡಿಸಿ, ಅರಣ್ಯ ಇಲಾಖೆ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಯಿತು.

ಮಲೆನಾಡು ರೈತ ಹಿತರಕ್ಷಣಾ ಸಮಿತಿ, ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಹಾಗೂ ವಿವಿಧ ಸಂಘಟನೆಗಳ ಸದಸ್ಯರು, ರೈತರು, ಬೆಳೆಗಾರರು ಸೇರಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಶೃಂಗೇರಿ– ಚಿಕ್ಕಮಗಳೂರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಎರಡೂ ಕಡೆ ಕಿಲೋ ಮೀಟರ್‌ಗಟ್ಟಳೆ ಉದ್ದ ವಾಹನಗಳು ಸಾಲು ಗಟ್ಟಿ ನಿಂತಿದ್ದವರು.

ಬುಧವಾರ ರಾತ್ರಿ ಬನ್ನೂರಿನ ಶಶಿಶೇಖರ್ ಎಂಬುವರ ತೋಟದ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆನೆ ಅನಿತಾ ಅವರಿಗೆ ತಿವಿದು ಗಾಯಗೊಳಿಸಿತ್ತು. ತಕ್ಷಣ ಅವರನ್ನು ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದಾರೆ.

ADVERTISEMENT

ಘಟನೆ ತಿಳಿಯುತ್ತಿದ್ದಂತೆ ಬನ್ನೂರು, ಹಲಸೂರು, ಹೇರೂರು, ಜಯಪುರ ಭಾಗದ ರೈತರು ಅರಣ್ಯ ಇಲಾಖೆ ಮುಂಭಾಗದಲ್ಲಿ ಸಭೆ ಸೇರಿ ಅಧಿಕಾರಿಗಳು, ಶಾಸಕರು ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಸಾವಿನ ಮನೆಯಲ್ಲಿ ರಾಜಕಾರಣ ಬೇಡ. ಬಯಲು ಸೀಮೆಗೂ ಮಲೆನಾಡಿಗೂ ವ್ಯತ್ಯಾಸ ಗೊತ್ತಿಲ್ಲದ ಅರಣ್ಯ ಸಚಿವರು ಕಾಡಿನಲ್ಲಿ ದನ ಬಿಡಬಾರದು ಎಂದು ನೀಡಿರುವ ಹೇಳಿಕೆ ಬಾಲಿಶವಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ಹಾನಿ ನಿರಂತರವಾಗಿ ನಡೆಯುತ್ತಿದೆ. ಸರ್ಕಾರದ ಪರಿಹಾರ ನಂಬಿಕೊಂಡು ಯಾರೂ ಜೀವನ ಮಾಡುತ್ತಿಲ್ಲ. ಅರಣ್ಯ ಸಚಿವರು ತಕ್ಷಣ ಸ್ಥಳಕ್ಕೆ ಬಂದು ವಸ್ತು ಸ್ಥಿತಿ ಪರಿಶೀಲಿಸಿ, ಸರ್ವ ಪಕ್ಷಗಳ ಮುಖಂಡರು, ಅರಣ್ಯ ಇಲಾಖೆ ಅಧಿಕಾರಿಗಳು, ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಅರ್ಥೈಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಬೇಕು’ ಎಂದರು.

ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಮಾತನಾಡಿ, ಅರಣ್ಯ ಸಚಿವರು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಪರಿಸರದ ಮಾಹಿತಿ ಇಲ್ಲದ ಸಚಿವರು ಅವೈಜ್ಞಾನಿಕ ಮಾತುಗಳನ್ನಾಡುತ್ತಿದ್ದಾರೆ. ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾದುದು ಈ ಕ್ಷೇತ್ರದ ಶಾಸಕರ ಜವಾಬ್ದಾರಿ. ಆದರೆ, ಅವರು ಸಾವಿನ ಮನೆಗೆ ಸೈರನ್ ಹಾಕಿಕೊಂಡು ಹೋಗುವುದರಲ್ಲೇ ಮಗ್ನರಾಗಿದಾರೆ. ಕ್ಷೇತ್ರದ ಬಗ್ಗೆ ಕಳಕಳಿ ಇಲ್ಲ ಎಂದು ದೂರಿದರು.

ಆನೆ ತುಳಿತದಿಂದ 4 ಜನ, ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡು 4 ಜನ, ರಸ್ತೆ ಗುಂಡಿಗೆ ಬಿದ್ದು 4 ಜನ, ಕಾಡುಕೋಣ ದಾಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ. ರೈತರ ಜೀವದ ಜೊತೆ ಚೆಲ್ಲಾಟ ಆಡಬೇಡಿ. ಆನೆಗಳ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮಾನವೀಯತೆ ಮರೆತ್ತಿದ್ದಾರೆ. ಅಹಿತಕರ ಘಟನೆಗೆ ಶಾಸಕರ ಕೈಲಾಗದ ವರ್ತನೆಯೇ ಕಾರಣ. ಕೇರಳದಲ್ಲಿ ₹25 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇಲ್ಲೂ ಕೂಡ ಪ್ರಾಣಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.‌

ಸ್ಥಳಕ್ಕೆ ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಬಂದು ಪ್ರತಿಭಟನೆ ಕೈ ಬಿಡುವಂತೆ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
‌ಅದಕ್ಕೆ ಒಪ್ಪದ ರೈತರು, ಆನೆಯನ್ನು ಹಿಡಿಯುವ ಕುರಿತು ಅಧಿಕಾರಿಗಳು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಪಟ್ಟು ಹಿಡಿದರು.
‌‌
ಮನವಿ ಸ್ವೀಕರಿಸಿ ಮಾತನಾಡಿದ ಕೊಪ್ಪ ಡಿಎಫ್‌ಒ ಶಿವಶಂಕರ್, ಮೂರು ಆನೆಗಳಿವೆ ಎಂಬ ಮಾಹಿತಿ ಇದ್ದು ಇಟಿಸಿ ಸಿಬ್ಬಂದಿ ಮೂಲಕ ಇರುವಿಕೆ ಪತ್ತೆ ಮಾಡಿ, ಓಡಿಸಲು ಅಥವಾ ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ. ಆನೆ ಯಾವ ಕಡೆಯಿಂದ ಬರುತ್ತಿವೆ ಎಂಬ ಬಗ್ಗೆ ಅಧ್ಯಯನ ನಡೆಸಿ, ಬೇಲಿ ನಿರ್ಮಾಣದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ಪ್ರಸನ್ನ ಕಿಬ್ಳಿ, ಅಭಿಷೇಕ್ ಹೊಸಳ್ಳಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಶೆಟ್ಟಿ ತುಮಖಾನೆ, ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ, ಕಾಂಗ್ರೆಸ್ ಮುಖಂಡ ಬಿ.ಕೆ.ಮಧುಸೂದನ್, ಕೊಳಲೆ ದೀಪಕ್, ಕಾರ್ತೀಕ್ ಕಾರಗದ್ದೆ, ಬಿ.ಸಿ.ಸಂತೋಷ್ ಕುಮಾರ್, ಚಂದ್ರಶೇಖರ್ ರೈ, ಕೌಶಿಕ್ ಪಟೇಲ್, ಅರೇನೂರು ಸಂತೋಷ್, ವೆನಿಲ್ಲಾ ಭಾಸ್ಕರ್ ಭಾಗವಹಿಸಿದ್ದರು.

ಕಾಡಾನೆ ದಾಳಿ: ಮಹಿಳೆ ಸಾವು

ಬಾಳೆಹೊನ್ನೂರು: ಕಾಡಾನೆ ತುಳಿದು ದಾವಣೆಗೆರೆ ಜಿಲ್ಲೆಯ ಕಾರ್ಮಿಕ ಮಹಿಳೆ ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲ್ಲೂಕಿನ ವಟ್ಟಪುರ ಸಾಸ್ವೆಹಳ್ಳಿಯ ಹಾಲೇಶ್ ಎಂಬುವರ ಪತ್ನಿ ಅನಿತಾ (25) ಮೃತಪಟ್ಟವರು. ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದ ಶಶಿಶೇಖರ್ ಎಂಬವರ ಕಾಫಿ ತೋಟದ ಕೆಲಸಕ್ಕೆಂದು ಬಂದಿದ್ದರು. ಕಾರ್ಮಿಕರ ಲೈನ್ ಮನೆಗೆ ಹೋಗುವ ದಾರಿಯಲ್ಲಿ ಕಾಡಾನೆ ಎದುರಾಗಿ ತುಳಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.