
ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ):ಕುದುರೆಮುಖ ರಾಷ್ಟ್ರೀಯ ಉದ್ಯಾನದ ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಭಾಗದಲ್ಲಿ ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಭಾನುವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಯಿತು.
ಆನೆ ಉಪಟಳದಿಂದ ಕೆರೆಗದ್ದೆಯಲ್ಲಿ ಇತ್ತೀಚೆಗೆ ಇಬ್ಬರು ರೈತರನ್ನು ಮೃತಪಟ್ಟಿದ್ದರು. ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಹಾಗೂ ಹಾರಂಗಿ ಆನೆ ಶಿಬಿರಗಳಿಂದ 5 ಆನೆಗಳನ್ನು ಭಾನುವಾರ ಬೆಳಿಗ್ಗೆ ಕೆರೆಕಟ್ಟೆಗೆ ಕರೆತರಲಾಗಿತ್ತು.
ಭಾನುವಾರ ಬೆಳಿಗ್ಗೆ ಕುದುರೆಮುಖದ ಭಗವತಿ ಅರಣ್ಯದಲ್ಲಿ ಆನೆ ಇರುವುದು ಖಚಿತವಾಯಿತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ಸಂಜೆ ವೇಳೆ ಶಿಬಿರದ ಆನೆಗಳನ್ನು ಭಗವತಿಗೆ ಸ್ಥಳಾಂತರಿಸಿದರು.
ಆನೆಯ ನೆಲೆ ಪತ್ತೆಗೆ ಅರಿವಳಿಕೆ ತಜ್ಞ ಡಾ.ಮುಜೀಬ್, ಶಾರ್ಪ್‌ಶೂಟರ್ ಅಕ್ರಮ್ ಅವರಿದ್ದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ನೇತೃತ್ವದ ಅಧಿಕಾರಿಗಳ ತಂಡ ತೆರಳಿತ್ತು.
ಮಧ್ಯಾಹ್ನ 3 ಗಂಟೆಗೆ ಭಗವತಿ ಭಾಗದ ಅರಣ್ಯದಲ್ಲಿ ಆನೆಯ ನೆಲೆ ಪತ್ತೆ ಆಗಿತ್ತು ಬಂದೂಕು ಬಳಸಿ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಪ್ರಜ್ಞೆ ತಪ್ಪಿದ್ದ ಆನೆಯನ್ನು ಸರಪಳಿ ಬಿಗಿದು ರಾತ್ರಿ 11 ಗಂಟೆ ವೇಳೆಗೆ ಅರಣ್ಯದಿಂದ ಗ್ರಾಮದ ವ್ಯಾಪ್ತಿಗೆ ತರಲಾಯಿತು.
‘ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವರ ಮೇಲೆ ಒತ್ತಡ ತಂದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದ್ದು, ಅದನ್ನು ದುಬಾರೆ ಆನೆ ಶಿಬಿರಕ್ಕೆ ಬಿಡಲಾಗುತ್ತದೆ. ಕ್ಷೇತ್ರದಲ್ಲಿ ಕಾಡಾನೆಗಳ ದಾಳಿಯಿಂದ 7 ಜನ ಮೃತಪಟ್ಟಿದ್ದಾರೆ‘ ಎಂದು ಶಾಸಕ ಟಿ.ಡಿ. ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.