ADVERTISEMENT

ಶೃಂಗೇರಿ | ಕಾಡಾನೆ ಹಾವಳಿ: ರೈಲ್ವೆ ಬ್ಯಾರಿಕೇಡ್‍ ಅಳವಡಿಸಲು ಒತ್ತಾಯ

‘ಕಾಡಾನೆ ಹಾವಳಿ ತಡೆಯಲು’ ಶೃಂಗೇರಿ ಅರಣ್ಯ ಇಲಾಖೆಯ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:37 IST
Last Updated 4 ಸೆಪ್ಟೆಂಬರ್ 2025, 4:37 IST
ಶೃಂಗೇರಿಯ ಅರಣ್ಯ ಇಲಾಖೆಯ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ‘ಕಾಡಾನೆ ಹಾವಳಿ ತಡೆಯಬೇಕೆಂಬ’ ಪ್ರತಿಭಟನೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇ ಮಾತನಾಡಿದರು
ಶೃಂಗೇರಿಯ ಅರಣ್ಯ ಇಲಾಖೆಯ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ‘ಕಾಡಾನೆ ಹಾವಳಿ ತಡೆಯಬೇಕೆಂಬ’ ಪ್ರತಿಭಟನೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇ ಮಾತನಾಡಿದರು   

ಶೃಂಗೇರಿ: ‘ತಾಲ್ಲೂಕಿಗೆ ಬಂದ ಕಾಡಾನೆಗಳನ್ನು ತಕ್ಷಣವೇ ಕುಮ್ಕಿ ಆನೆ ಹಾಗೂ ಶಾರ್ಪ್‌ಶೂಟರ್‌ಗಳ ಸಹಾಯದಿಂದ ಹಿಡಿಯುವ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಆನೆಗಳು ಮಲೆನಾಡಿಗೆ ಬಾರದಂತೆ ಅರಣ್ಯದ ಸುತ್ತಮುತ್ತ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಪಟ್ಟು ಹಿಡಿದರು.

ಶೃಂಗೇರಿ ಅರಣ್ಯ ಇಲಾಖೆಯ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ‘ಕಾಡಾನೆ ಹಾವಳಿ ತಡೆಯಬೇಕೆಂಬ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಕಾಡಾನೆಗಳಿಂದ ತಾಲ್ಲೂಕಿನ ರೈತರು, ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅತಿವೃಷ್ಟಿಯಿಂದ ಅರ್ಧ ಬೆಳೆ ನಾಶವಾಗಿದ್ದು, ಉಳಿದ ಬೆಳೆಯನ್ನು ಉಳಿಸಲು ರೈತರು ಶ್ರಮ ಪಡುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಕಾಡಾನೆಗಳು ತೋಟ, ಗದ್ದೆಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟದಲ್ಲಿ ದಿನಕಳೆಯುವಂತಾಗಿದೆ. ಕಾಡಾನೆಗಳನ್ನು ಬೇರೆ ಓಡಿಸಿದರೆ, ಅವು ಮತ್ತೆ ಗ್ರಾಮಕ್ಕೆ ಬರುತ್ತಿವೆ. ಆದರಿಂದ ಅವುಗಳನ್ನು ಹಿಡಿಯಬೇಕು. ಅರಣ್ಯ ಇಲಾಖೆ ಜನರಲ್ಲಿ ವಿಶ್ವಾಸ ಮೂಡಿಸುವ ರೀತಿ ಕಾರ್ಯನಿರ್ವಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್ ಮಾತನಾಡಿ, ‘ಶೃಂಗೇರಿ ತಾಲ್ಲೂಕು ಪ್ರಸ್ತುತ ಸಮಸ್ಯೆಗಳ ಸರಮಾಲೆಯ ಅಗರವಾಗಿದೆ. ರೈತರನ್ನು ಸರ್ಕಾರ ದುರ್ಬಲ ವರ್ಗದವರು ಎಂದು ಕಡೆಗಣಿಸಬಾರದು. ಕ್ಷೇತ್ರದಲ್ಲಿ ಈಗಾಗಲೇ ಆನೆ ತುಳಿತದಿಂದ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಪರಿಹಾರ ನೀಡಿದರೆ ನಮ್ಮ ಕೆಲಸ ಮುಗಿಯಿತು ಎಂದು ಸರ್ಕಾರ ಎಣಿಸಬಾರದು. ಜನರ ಜೀವನಕ್ಕೆ ನೆಮ್ಮದಿ ನೀಡುವ ಕೆಲಸವಾಗಬೇಕು. ತಾಲ್ಲೂಕಿನಲ್ಲಿ ಮುಂದೆ ಕಾಡಾನೆಯಿಂದ ದೊಡ್ಡ ಅನಾಹುತ ಆಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದರು.

ರೈತ ಕೆಲವಳ್ಳಿ ಕಳಸಪ್ಪ ಮಾತನಾಡಿ, ‘ರಾಷ್ಟ್ರೀಯ ಉದ್ಯಾನ ಪ್ರಾರಂಭಿಸುವಾಗ ಜನರು ನೋಡುತ್ತಿದ್ದರು. ಆದರೆ, ಈಗ ಅದರ ಸಮಸ್ಯೆ ಮನೆ ಬಾಗಿಲಿಗೆ ಬಂದಿದೆ. ಬೀದಿ ನಾಯಿ ಕೊಲ್ಲಬಾರದು ಎಂದು ಕಾನೂನು ಇದೆ. ಆದರೆ, ಕಾಡುಪ್ರಾಣಿಗಳ ಉಪಟಳದಿಂದ ಜನರು ಮರಣ ಹೊಂದಿದ್ದಾರೆ. ಕಾನೂನಿಗಿಂತ ಜನರ ಜೀವಕ್ಕೆ ಬೆಲೆ ಜಾಸ್ತಿ ಎಂಬುದನ್ನು ಸರ್ಕಾರ ಅರಿಯಬೇಕು. ಮಾರಕ ಅರಣ್ಯ ಹಕ್ಕುಗಳ ಕಾಯ್ದೆ ಇಂದಿಗೂ ಜೀವಂತವಾಗಿದೆ. ಈ ಸಮಸ್ಯೆಗಳು ಹಾಗೇ ಉಳಿಯಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿಯೇ ಮುಖ್ಯ ಕಾರಣ’ ಎಂದರು.

ಪ್ರತಿಭಟನಾಕಾರರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸೆ. 10ರೊಳಗೆ ಕಾಡಾನೆಗಳನ್ನು ಹಿಡಿಯದಿದ್ದರೆ ರಸ್ತೆ ತಡೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಮಿತಿ ಗೌರವಾಧ್ಯಕ್ಷ ಕಚ್ಚೋಡಿ ಶ್ರೀನಿವಾಸ್ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಗೋಳ್ಗೋಡು ಚಂದ್ರಶೇಖರ್, ಕೆ.ಎಸ್. ರಮೇಶ್, ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಗೇರುಬೈಲು ಶಂಕರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ವೇಣುಗೋಪಾಲ್, ಬಿಜೆಪಿ ಮುಖಂಡರಾದ ನೂತನ್ ಕುಮಾರ್, ಆಗುಂಬೆ ಗಣೇಶ್ ಹೆಗ್ಡೆ, ಸುರೇಶ್ ಜಟಿಗೇಶ್ವರ, ದಿನೇಶ್ ಅಂಗುರ್ಡಿ, ನಾಗೇಶ್ ನಾಯ್ಕ್, ಎಚ್.ಎಸ್ ಸುಬ್ರಹ್ಮಣ್ಯ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಮಧುಕುಮಾರ್  ಇದ್ದರು.

ಶೃಂಗೇರಿಯ ಅರಣ್ಯ ಇಲಾಖೆಯ ಎದುರು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ‘ಕಾಡಾನೆ ಹಾವಳಿ ತಡೆಯಬೇಕೆಂಬ’ ಪ್ರತಿಭಟನೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇ ಮಾತನಾಡಿದರು
ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ
‘ಕಾಡಾನೆ ಓಡಿಸುವ ಕೆಲಸವನ್ನು ನಮ್ಮ ಅಧಿಕಾರದ ಮಿತಿಯಲ್ಲಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಆನೆಗಳು ಸಂಚರಿಸುವ ಪ್ರದೇಶದಲ್ಲಿ ತೋಟ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಗೆ ಕಳಿಸುತ್ತಿದ್ದೇವೆ. ಸಾರ್ವಜನಿಕರಿಗೆ ಪ್ರತಿದಿನ ಆನೆ ಯಾವ ಭಾಗದಲ್ಲಿ ಸಂಚರಿಸುತ್ತಿದೆ ಎಂದು ಧ್ವನಿವರ್ಧಕದ ಮೂಲಕ ತಿಳಿಸಿದ್ದೇವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯ ಪಡೆಯವರು ಆನೆ ಸಂಚಾರದ ಚಲನವಲನದ ಬಗ್ಗೆ ಗಮನ ಹರಿಸಿದ್ದಾರೆ. ಕೂಡಲೇ ಕಾಡಾನೆಯನ್ನು ಓಡಿಸುತ್ತೇವೆ. ಕಾಡಾನೆಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹಿಡಿಯುವುದು ಕಷ್ಟ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕುರಿತು ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ನೀಡಲಾಗಿದೆ. ಕಾಡಾನೆಗಳನ್ನು ಹಿಡಿಯುವ ಕುರಿತು ವನ್ಯಜೀವಿ ವಿಭಾಗದ ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ’ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.