ADVERTISEMENT

ಆನೆ ದಾಳಿಗೆ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ

ನಾನು ಜನಪರ ಶಾಸಕ, ಬೆದರಿಕೆಗೆ ಬೆನ್ನು ಮಾಡಿ ಓಡಿದವನಲ್ಲ.;ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:06 IST
Last Updated 22 ನವೆಂಬರ್ 2022, 7:06 IST
ಶೋಭಾ ಅವರ ಅಂತ್ಯಕ್ರಿಯೆಗೆ ಬಂದಿದ್ದ ಶಾಸಕ ಎಂ.ಪಿ ಕುಮಾರಸ್ವಾಮಿ ಸ್ಥಳೀಯರೊಂದಿಗೆ ಮಾತನಾಡಿದರು.
ಶೋಭಾ ಅವರ ಅಂತ್ಯಕ್ರಿಯೆಗೆ ಬಂದಿದ್ದ ಶಾಸಕ ಎಂ.ಪಿ ಕುಮಾರಸ್ವಾಮಿ ಸ್ಥಳೀಯರೊಂದಿಗೆ ಮಾತನಾಡಿದರು.   

ಮೂಡಿಗೆರೆ: ತಾಲ್ಲೂಕಿನ ಎಸ್ಟೇಟ್ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಶೋಭಾ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹುಲ್ಲೇಮನೆ ಗ್ರಾಮದಲ್ಲಿ ನಡೆಯಿತು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಭಾನುವಾರ ಬೆಳಿಗ್ಗೆ ಜಾನುವಾರಿಗೆ ಹುಲ್ಲು ಕೊಯ್ಯುತ್ತಿದ್ದ ವೇಳೆ ಕಾಡಾನೆ ಶೋಭಾ ಅವರ ಮೇಲೆ ದಾಳಿ ನಡೆಸಿತ್ತು.

ಸೋಮವಾರ ಬೆಳಿಗ್ಗೆ ಶಾಸಕ ಎಂ.ಪಿ ಕುಮಾರಸ್ವಾಮಿ ಮೃತರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ‘ಕಾಡಾನೆ ದಾಳಿ ನಡೆದು ಜೀವ ಹಾನಿಯಾಗಿರುವುದು ಬೇಸರದ ಸಂಗತಿಯಾಗಿದೆ.
ಕುಟುಂಬದವರ ದುಃಖದಲ್ಲಿ ಭಾಗಿಯಾಗಿ ಸಮಸ್ಯೆ ಪರಿಹರಿಸಬೇಕು ಎಂಬ ನಿಟ್ಟಿನಲ್ಲಿಯೇ ಭಾನುವಾರ ನಾನು ಇಲ್ಲಿಗೆ ಬಂದಿದ್ದೆ. ಆದರೆ, ಆಹಿತಕರ ಘಟನೆ ನಡೆದದ್ದು ಮನಸ್ಸಿಗೆ ನೋವುಂಟು ಮಾಡಿತು. ನಾನು ಜನರ ಪರವಾದ ಶಾಸಕ, ಎಂದಿಗೂ ಬೆದರಿಕೆಗೆ ಬೆನ್ನು ಮಾಡಿ ಓಡಿದವನಲ್ಲ. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಹಾಗೂ ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ADVERTISEMENT

ಕಣ್ಣೀರು: ಸಂಜೀವಿನಿ ಒಕ್ಕೂಟದಲ್ಲಿದ್ದ ಶೋಭಾ, ಸ್ವಸಹಾಯ ಸಂಘದಲ್ಲಿ ಸಕ್ರಿಯ ಸದಸ್ಯರಾಗಿದ್ದರು.
ಇದೇ 28 ರಂದು ನಡೆಯಲಿದ್ದ ಮಾಸಿಕ ಸಂತೆಯಲ್ಲಿ ಸ್ಥಳೀಯ ಚಕ್ಕುಲಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು’ ಎಂದು ಸಂಜೀವಿನಿ ಒಕ್ಕೂಟದ ಗೆಳತಿಯರು ಕಣ್ಣೀರು ಹಾಕಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಕೆ ಶಿವೇಗೌಡ, ಸಂಜಯ್ ಕೊಟ್ಟಿಗೆಹಾರ, ಭರತ್ ಬಾಳೂರು, ಡಿ.ಬಿ ವಿಜೇಂದ್ರ, ಜಿ.ಬಿ ಧರ್ಮಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.