
ಕಡೂರು ರೈಲು ನಿಲ್ದಾಣ
ಚಿಕ್ಕಮಗಳೂರು: ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ನಾಪತ್ತೆಯಾಗಿದ್ದ ಕಡೂರು ತಾಲ್ಲೂಕು ಕಚೇರಿ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಅವರನ್ನು ಪೊಲೀಸರು ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ಅವರ ನಿವಾಸದಲ್ಲಿ ಪತ್ತೆಮಾಡಿದ್ದಾರೆ.
ಇಕ್ಬಾಲ್ ಅವರು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದು ಶಾಸಕ ಕೆ.ಎಸ್. ಆನಂದ್ ಅವರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರು ಇಕ್ಬಾಲ್ ಅವರಿಗೆ ಹಲವು ಬಾರಿ ನಿರ್ದೇಶನ ನೀಡಿದ್ದರು. ಆದರೂ ಸರಿಪಡಿಸಿಕೊಳ್ಳದ ಕಾರಣ ಬೇರೊಬ್ಬ ಸಾಂಖ್ಯಿಕ ನಿರೀಕ್ಷಕರನ್ನು ನಿಯೋಜಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ಅದರಂತೆ ಬುಧವಾರ (ಫೆ. 11) ಇಕ್ಬಾಲ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಬೇಸತ್ತು ಇಕ್ಬಾಲ್ ಕಡೂರು ಶಾಸಕ ಕೆ.ಎಸ್. ಆನಂದ್ ಅವರ ಆಪ್ತ ಕಾರ್ಯದರ್ಶಿ ಎಚ್. ಮಂಜುನಾಥ್, ತಹಶೀಲ್ದಾರ್ ಪೂರ್ಣಿಮಾ ಅವರು ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಅವರನ್ನು ಪತ್ತೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.