ADVERTISEMENT

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಎಚ್.ಡಿ.ತಮ್ಮಯ್ಯ

ವಿಶ್ವ ಪ್ರವಾಸೋದ್ಯಮ ದಿನ ಆಚರಣೆ; ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:04 IST
Last Updated 28 ಸೆಪ್ಟೆಂಬರ್ 2025, 5:04 IST
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು 
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು    

ಚಿಕ್ಕಮಗಳೂರು: ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮ ಪೂರ್ವಿಕರು ಉಳಿಸಿ ಹೋಗಿರುವ ಈ ಸುಂದರವಾದ ಪ್ರಕೃತಿ-ಪರಿಸರವನ್ನು ಹಾಳು ಮಾಡಲು ಬಿಡದೆ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಗರದಿಂದ ಮುತ್ತೋಡಿವರೆಗೆ ನಡೆದ ಬೈಕ್ ರ‍್ಯಾಲಿಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದಲೇ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇಂದು ಎಲ್ಲೆಡೆಯ ಪ್ರದೇಶಗಳು ಕಾಂಕ್ರೀಟ್ ನಗರವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಜನರು ಪರಿಸರ ಪ್ರೇಮಿಗಳಾಗಿದ್ದು, ಪಶ್ಚಿಮಘಟ್ಟದಲ್ಲಿರುವ ಈ ಜಿಲ್ಲೆಯ ರಮಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಪ್ರವಾಸಿಗರಿಗೆ ಪರಿಸರ ಉಳಿಸುವ ಕಾಳಜಿಯ ಬಗ್ಗೆ ತಿಳಿ ಹೇಳಬೇಕು ಎಂದರು.

ADVERTISEMENT

ಈಗಾಗಲೇ ಚಂದ್ರದ್ರೋಣ ಪರ್ವತ ಶ್ರೇಣಿಯ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ಮುಂದೆ ನಗರವನ್ನು ಸಹ ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಈ ಜಿಲ್ಲೆ ಪಂಚ ನದಿಗಳ ಉಗಮಸ್ಥಾನವಾಗಿದ್ದು, ಪ್ಲಾಸ್ಟಿಕ್ ಹಾವಳಿಯಿಂದ ಈ ನದಿಗಳ ಅಸ್ತಿತ್ವಕ್ಕೆ ಮುಂದೆ ಸಂಚಕಾರ ಬರಬಹುದು. ಹೀಗಾಗಿ ಅವುಗಳನ್ನು ಕಾಪಾಡಿಕೊಳ್ಳುವುದು ಸಹ ನಮ್ಮೆಲ್ಲರ ಜವಾಬ್ದಾರಿ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಚಿಕ್ಕಮಗಳೂರನ್ನು ಹುಡುಕುವ ಅಗತ್ಯವಿಲ್ಲ. ಈ ಜಿಲ್ಲೆ ಪ್ರವಾಸೋದ್ಯಮದಲ್ಲಿ ಅಷ್ಟೊಂದು ವಿಶೇಷವಾಗಿ ಗುರುತಿಸಿಕೊಂಡಿದೆ. ಚಿಕ್ಕಮಗಳೂರು ಪರಿಸರವನ್ನು ಉಳಿಸಬೇಕು, ಬೆಳೆಸಬೇಕು. ಪರಿಸರದ ಜತೆಗೆ ಪೀಳಿಗೆಯಲ್ಲಿ ಧಾರ್ಮಿಕತೆ, ಸಾಂಸ್ಕೃತಿಕತೆ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಆಶಿಸಿದರು.

 ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಮಾತನಾಡಿ, ಪ್ರತೀ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಪ್ರಚಲಿತವಿಲ್ಲದ ಪ್ರವಾಸಿ ತಾಣಗಳನ್ನು ಪ್ರಚುರಪಡಿಸುವ ಸಲುವಾಗಿ ಪ್ರತೀ ವರ್ಷವೂ ಬೈಕ್ ರ‍್ಯಾಲಿ, ಜೀಪ್ ರ‍್ಯಾಲಿ, ಸೈಕಲ್ ರ‍್ಯಾಲಿಯನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.

ವಿಶ್ವ ಪ್ರವಾಸೋದ್ಯಮದ ಪ್ರಯುಕ್ತ ದತ್ತಪೀಠ, ಕವಿಕಲ್‌ಗಂಡಿ, ಕೊಳಗಾಮೆ ಮಾರ್ಗವಾಗಿ ಮುತ್ತೋಡಿ ಅರಣ್ಯ, ಮಲ್ಲಂದೂರು ಶೂಟಿಂಗ್ ಪಾಯಿಂಟ್, ಉಕ್ಕುಡ ಫಾಲ್ಸ್, ರಂಗನಬೆಟ್ಟ, ಬಂಡಕಲ್ಲು ಬೆಟ್ಟ, ತೋಟ್ಲಪ್ಪನ ಗುಡ್ಡ ಹೀಗೆ ಪರ್ಯಾಯ ತಾಣಗಳತ್ತ ಪ್ರವಾಸಿಗರ ಗಮನ ಸೆಳೆಯುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಟೂರಿಸಂ ವೆಬ್‌ಸೈಟ್ ಕೂಡ ಲಾಂಚ್ ಆಗಿದೆ. ಅಲ್ಲದೆ, ರೀಲ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಪ್ರಚುರಪಡಿಸುವ ಸಲುವಾಗಿ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.

ಸುಮಾರು 35 ಮಂದಿ ಬೈಕ್ ಸವಾರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ವಕೀಲರಾದ ತೇಜಸ್, ರೌಂಡ್ ಟೇಬಲ್ ಅಧ್ಯಕ್ಷ ಅನಿಲ್, ಜೀಪ್ ಅಸೋಸಿಯೇಶನ್‌ನ ಅಧ್ಯಕ್ಷ ಇನಾಯತ್, ರೆಸಾರ್ಟ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ರೌಂಡ್ ಟೇಬಲ್, ಜಿಲ್ಲಾ ಹೋಂಸ್ಟೇ ಮಾಲೀಕರ ಸಂಘ, ಜಿಲ್ಲಾ ರೆಸಾರ್ಟ್ ಮಾಲೀಕರ ಸಂಘ, ಜೀಪ್ ಅಸೋಸಿಯೇಶನ್, ಅಡ್ವೆಂಚರ್ ಕ್ಲಬ್ ಸಹಯೋಗದಲ್ಲಿ ಬೈಕ್‌ ರ‍್ಯಾಲಿ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.