ADVERTISEMENT

ಆಲ್ದೂರು | ಅಧಿಕ ಮಳೆ: ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

ಕೊಳೆ ರೋಗದ ಆತಂಕದಲ್ಲಿ ಅರೇಬಿಕ, ರೋಬಸ್ಟ ಕಾಫಿ ಬೆಳೆ: ಸರ್ಕಾರದ ನೆರವಿಗಾಗಿ ಮನವಿ

ಜೋಸೆಫ್ ಎಂ.ಆಲ್ದೂರು
Published 5 ಸೆಪ್ಟೆಂಬರ್ 2025, 4:41 IST
Last Updated 5 ಸೆಪ್ಟೆಂಬರ್ 2025, 4:41 IST
<div class="paragraphs"><p>ಕೊಳೆ ರೋಗಕ್ಕೆ ತುತ್ತಾಗಿರುವ ಕಾಫಿ ಬೆಳೆ</p></div>

ಕೊಳೆ ರೋಗಕ್ಕೆ ತುತ್ತಾಗಿರುವ ಕಾಫಿ ಬೆಳೆ

   

ಲ್ದೂರು: ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಕಾಫಿ ಬೆಳೆ ರೋಗಕ್ಕೆ ತುತ್ತಾಗಿ ನಷ್ಟದ ಭೀತಿ ಎದುರಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕೊಳೆ ರೋಗವು ಕಾಫಿ ಫಸಲನ್ನು ನಾಶಪಡಿಸುವುದಲ್ಲದೆ ಗಿಡಗಳನ್ನು ದುರ್ಬಲವಾಗಿಸಿ ಸಾಯುವಂತೆ ಮಾಡುತ್ತಿದ್ದು, ಬೆಳೆಗಾರರಿಗೆ ತೀರದ ಸಮಸ್ಯೆಯಾಗಿ ಪರಿಣಮಿಸಿದೆ.

ADVERTISEMENT

ಆವತಿ, ವಸ್ತಾರೆ, ಆಲ್ದೂರು ಹೋಬಳಿಗಳ ಗ್ರಾಮಗಳಲ್ಲಿ ದಾಖಲೆಯ ಮಳೆ ಸುರಿಯುತ್ತಿದ್ದು, ಈಗಾಗಲೇ ವನ್ಯ ಜೀವಿಗಳ ಹಾವಳಿಯಿಂದ ಬೇಸತ್ತ ರೈತರಿಗೆ ಮಳೆಯ ಅಬ್ಬರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ರೈತರ ಸಂಕಷ್ಟ ಬಗೆಹರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.

ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಮಾತನಾಡಿ, ‘ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯ ಪರಿಣಾಮ ಶೇ 50ರಷ್ಟು ಕಾಫಿ ಬೆಳೆ ನೆಲಕಚ್ಚಿದ್ದು, ಒಂದು ಎಕರೆ ಪ್ರದೇಶದಲ್ಲಿ 750ರಿಂದ 800 ಅರೇಬಿಕ ಗಿಡಗಳು ಇದ್ದು ಅದರಲ್ಲಿ 500ರಿಂದ 600 ಗಿಡಗಳಿಗೆ ಕೊಳೆರೋಗ ಹರಡಿದೆ. ಕೂಡಲೇ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ರಾಜ್ಯ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಸುರೇಶ್ ಮಾತನಾಡಿ, ‘ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಕಾರ್ಮಿಕರ ಕೊರತೆ, ಕಾಡಾನೆಗಳ ಹಾವಳಿ ಹೀಗೆ ಕಾಫಿ ಬೆಳೆಗಾರರ ಬದುಕು ಮಳೆಯೊಂದಿಗೆ ಸೇರಿ ತೊಳಲಾಡುವಂತಾಗಿದ್ದು, ವರುಣನ ಅವಕೃಪೆ  ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಐದಳ್ಳಿ ಸಿಂಧು ಕುಮಾರ್, ‘ಬೆಳೆಗಾರರಿಗೆ ಹಲವು ಸಮಸ್ಯೆಗಳಿದ್ದು ಅದನ್ನು ಸಮಗ್ರವಾಗಿ ಬಗೆಹರಿಸುವಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಬೆಳೆಗಾರರೇ ಕಾಫಿ ಉದ್ಯಮದಿಂದ ಹಿಂದೆ ಸರಿಯುವ ಕಾಲ ಬಹುದೂರ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ‘ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಕಾಫಿ ಬೋರ್ಡ್ ಜಂಟಿಯಾಗಿ ನಷ್ಟದ ಸರ್ವೆ ನಡೆಸಬೇಕು. ರಾಷ್ಟ್ರೀಯ ವಿಪತ್ತು ಯೋಜನೆ ಅಡಿ ಶೇ 33ಕ್ಕಿಂತ ಹೆಚ್ಚಿನ ನಷ್ಟವಾದರೆ ಹೆಕ್ಟೇರ್‌ಗೆ ₹18 ಸಾವಿರ ಮತ್ತು ಹಿಂದಿನ ರಾಜ್ಯ ಸರ್ಕಾರ ₹10 ಸಾವಿರ ಒಟ್ಟಾಗಿ ನೀಡುತ್ತಿದ್ದರು. ಪ್ರಸ್ತುತ ರಾಜ್ಯ ಸರ್ಕಾರ ಪರಿಹಾರಧನ ಒದಗಿಸುತ್ತಿಲ್ಲ. ಕನಿಷ್ಠ ಹೆಕ್ಟೇರ್‌ಗೆ ₹50 ಸಾವಿರವಾದರೂ ನೀಡಬೇಕು. ಸಣ್ಣ ಬೆಳೆಗಾರರನ್ನು ಈ ಯೋಜನೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಕೆಜಿಎಫ್ ನಿಕಟಪೂರ್ವ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್, ಈ ಬಾರಿ ಬೇಸಿಗೆಯ ಆರಂಭದಿಂದಲೂ ಕಾಡಿದ ಅಕಾಲಿಕ ಮಳೆ ಕಾಫಿ ಕಾಯಿ ಕಟ್ಟುವ ಸಂದರ್ಭದಲ್ಲಿ ತೊಂದರೆ ಉಂಟು ಮಾಡಿದೆ. ಈಗ ಮಳೆ ಬಿಡುವು ನೀಡದೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಕಾಫಿ, ಕಾಳು ಮೆಣಸು ಬೆಳೆಗಳಲ್ಲಿ ರೋಗದ ಲಕ್ಷಣಗಳು ಅಧಿಕಗೊಂಡಿವೆ. ಮಳೆ ಬಿಡುವನ್ನು ನೀಡಿದರೆ ಮಾತ್ರ ರೋಗಗಳ ನಿಯಂತ್ರಣಕ್ಕೆ ಪೌಷ್ಟಿಕ ಗೊಬ್ಬರ ಮತ್ತು ಔಷಧ ಸಿಂಪಡಣೆ ಮಾಡಬಹುದು. ಮಳೆ ಹೀಗೆ ಮುಂದುವರೆದರೆ ಕಾಫಿ ಉದ್ಯಮ ಅಪಾರ ನಷ್ಟ ಕಾಣಲಿದೆ. ಮೆಣಸಿನ ಬಳ್ಳಿಗಳ ಬೇರಿನ ಭಾಗದಲ್ಲಿ ಶೀತ ವಾತಾವರಣದಲ್ಲಿ ಉಸಿರಾಡಲು ಸಾಧ್ಯವಾಗದೆ ಗಿಡಗಳು ಸಾಯುತ್ತವೆ ಎಂದು ತಿಳಿಸಿದರು.

ಅತಿಯಾದ ತೇವಾಂಶದಿಂದ ನೆಲಕಚ್ಚಿರುವ ಕಾಳು ಮೆಣಸು ಬೀಳುಗಳು

ಕಾಫಿ ಬೆಳೆಗೆ ವಿಮಾ ಸೌಲಭ್ಯ ಒದಗಿಸಲು ಒತ್ತಾಯ

ಮಳೆಗೆ ಹೆಚ್ಚಾದ ತೇವಾಂಶ

ಮಳೆ ಬಿಡುವು ನೀಡಿದ ಬಳಿಕ ನಷ್ಟ ಪ್ರಮಾಣದ ಅಂತಿಮ ಸರ್ವೆ: ಭರವಸೆ

ಕೊಳೆ ರೋಗದಿಂದ ದುರ್ಬಲವಾಗಿರುವ ಕಾಫಿ ಗಿಡ

ಜಂಟಿ ಸರ್ವೆ ಬಳಿಕ ಪರಿಹಾರಕ್ಕೆ ಮನವಿ
ಮಳೆ ಈ ಬಾರಿ ಹೆಚ್ಚಿನ ಸಂಖ್ಯೆಯ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂದಿದ್ದು, ನೂರು ದಿನಗಳ ಕಾಲ ನಿರಂತರವಾಗಿ ಸುರಿದಿದೆ. ಎಲ್ಲಾ ಭಾಗಗಳಲ್ಲೂ ಶೀತ ವಾತಾವರಣ ಅಧಿಕವಾಗಿದ್ದು, ತೇವಾಂಶದ ಅನುಪಾತದ ಪ್ರಮಾಣ ಹೆಚ್ಚಾಗಿದೆ. ಕಾಫಿ ಮಂಡಳಿಯಿಂದ ಪೂರ್ವಭಾವಿಯಾಗಿ ನಷ್ಟ ಪ್ರಮಾಣದ ಸರ್ವೆಯನ್ನು ಮಾಡಲಾಗಿದ್ದು, ಸಪ್ಟೆಂಬರ್ ತಿಂಗಳು ಆಗಿರುವುದರಿಂದ ಪ್ರಸ್ತುತ ಅಂತಿಮ ಸರ್ವೆಯನ್ನು ಕಂದಾಯ ಮತ್ತು ಕಾಫಿ ಮಂಡಳಿ ಜಂಟಿಯಾಗಿ ವರದಿ ಸಿದ್ಧಪಡಿಸಿ ನಷ್ಟ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ಯೋಜನೆಯ ಅನುದಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.