ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಮಾರಣಾಂತಿಕ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು’ ಎಂದು ವಕೀಲ ಅನೀಲಕುಮಾರ್ ಒತ್ತಾಯಿಸಿದರು.
‘18 ವರ್ಷದಿಂದ ವಕೀಲ ವೃತ್ತಿ ಜತೆಗೆ ಬುದ್ಧ, ಬಸವ, ಅಂಬೇಡ್ಕರ್ ಆಶಯ ಸಾರುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇನೆ. 2025 ಜ. 8ರಂದು ಭೀಮಾ ಕೊರಂಗಾವ್ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಗಿದೆ. ದೇಣಿಗೆ ಸಂಗ್ರಹಿಸಿದ ಹಣ ಹಾಗೂ ರಶೀದಿ ಪುಸ್ತಕವನ್ನು ದಂಟರಮಕ್ಕಿ ಶ್ರೀನಿವಾಸ್ ಕೊಡಲಿಲ್ಲ. ನಾನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತೇನೆ ಎಂದಿದ್ದರು. ಎಲ್ಲರ ಅಭಿಪ್ರಾಯ ಪಡೆದು ಹೊನ್ನೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
‘ಸಂಗ್ರಹವಾದ ದೇಣಿಗೆ ಹಣದ ಲೆಕ್ಕ ಕೊಡುವಂತೆ ವ್ಯಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕೇಳಿಕೊಂಡೆವು. ಕಾರ್ಯಕ್ರಮಕ್ಕೆ ಶ್ರಮಿಸಿದವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ದಂಟರಮಕ್ಕಿ ಶ್ರೀನಿವಾಸ್ ಹಾಗೂ ವೇದಿಕೆಗೆ ಆಹ್ವಾನವಿಲ್ಲದ ಮರ್ಲೆ ಅಣ್ಣಯ್ಯ, ಕೃಷ್ಣಮೂರ್ತಿ, ಚಲವಾದಿ ರಘು, ಲಕ್ಕಾ ಸಂತೋಷ್, ಲಕ್ಷ್ಮೀಪುರ ಸಂತೋಷ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ ಅವರು ನನ್ನ ಮೇಲೆ ದ್ವೇಷ ಸಾಧಿಸಿದರು. ಏಳು ತಿಂಗಳಿನಿಂದ ನಿರಂತರ ಪತ್ರಿಕಾಗೋಷ್ಠಿ ನಡೆಸಿ ಅಪಪ್ರಚಾರ ಮಾಡಿ ಸುಳ್ಳು ಸುದ್ದಿ ಹರಡಿದರು’ ಎಂದು ದೂರಿದರು.
ಇವರ ಕುಮ್ಮಕ್ಕಿನಿಂದಲೇ ಓಂಕಾರಮೂರ್ತಿ, ಅವರ ಸಹೋದರ ವಿರೂಪಾಕ್ಷ ಮತ್ತು ಪಲ್ಲವಿ ಸೇರಿ ಬಸವನಹಳ್ಳಿ ಠಾಣೆಯಲ್ಲಿ ಸುಳ್ಳು ದೂರು ನೀಡಿದರು. ಅಪಘಾತ ಪ್ರಕರಣವನ್ನು ತಿರುಚಿ ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಿದ್ದರು ಎಂದರು.
ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂತೋಷ್ ಲಕ್ಯಾ ಅವರ ಪತ್ನಿ ನರ್ಸಿಂಗ್ ಆಫೀಸರ್ ಆಗಿದ್ದಾರೆ. ಖಾಲಿ ಇರುವ ನಿಲಯ ಪಾಲಕರ ಹುದ್ದೆಯನ್ನು ಕಾನೂನು ಬಾಹಿರವಾಗಿ ಪಡೆಯಲು ಶಾಲೆಯ ಆಂತರಿಕ ವಿಚಾರದಲ್ಲಿ ವಿನಾಕಾರಣ ಇದೇ ತಂಡ ಹಸ್ತಕ್ಷೇಪ ಮಾಡಿತು. ವಸತಿ ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಸಿಬ್ಬಂದಿಗೆ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಈ ತಂಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ರಾಜೇಗೌಡ, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಅನೀಲ್, ರಮೇಶ್, ಹುಣಸೇಮಕ್ಕಿ ಲಕ್ಷ್ಮಣ, ರಾಜು, ನಾಗರಿಕ ಹೋರಾಟ ಸಮಿತಿ ಸದಸ್ಯ ಈಶ್ವರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.