ADVERTISEMENT

ಮೂಡಿಗೆರೆ: ಭಕ್ತರು ಎಸೆದ ‍ಪ್ಲಾಸ್ಟಿಕ್ ಸಂಗ್ರಹಿಸಿ ಆದಾಯ ಪಡೆಯುವ ಕುಟುಂಬ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:16 IST
Last Updated 17 ಫೆಬ್ರುವರಿ 2026, 3:16 IST
ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದ ಸತೀಶ್ ಕುಟುಂಬ
ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದ ಸತೀಶ್ ಕುಟುಂಬ   

ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ನಾಡಿನ‌ ವಿವಿಧೆಡೆಯಿಂದ ಚಾರ್ಮಾಡಿ ಘಾಟಿ ಮೂಲಕ ಸಾಗಿದ ಪಾದಯಾತ್ರಿಗಳು ಎಸೆದ 1ಸಾವಿರ ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಕುಟುಂಬವೊಂದು ಆದಾಯ ಪಡೆದಿದೆ.

ಹಾಸನ ಜಿಲ್ಲೆಯ ಹಗರೆ ಮೂಲದ ಕುಟುಂಬವು ಪ್ರತಿವರ್ಷವೂ ಪಾದಯಾತ್ರೆಯ ಸಮಯದಲ್ಲಿ ಹಾಸನದ ಚನ್ನರಾಯಪಟ್ಟಣದಿಂದ ಧರ್ಮಸ್ಥಳದವರೆಗೂ ರಸ್ತೆ ಬದಿಯಲ್ಲಿ ಬೀಳುವ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಮಾರಾಟ ಮಾಡುವ ಮೂಲಕ ಕುಟುಂಬಕ್ಕೆ ಆದಾಯ ಮಾಡಿಕೊಳ್ಳುತ್ತಿದೆ. ಗೂಡ್ಸ್ ವಾಹನದಲ್ಲಿ ತಮ್ಮ ಸಂಸಾರದೊಂದಿಗೆ ನಿಗದಿತ ಸ್ಥಳಕ್ಕೆ ತೆರಳುವ ಹಗರೆಯ ಸತೀಶ್, ಅಲ್ಲಲ್ಲಿ ತಮ್ಮ ವಾಹನವನ್ನು ನಿಲ್ಲಿಸಿಕೊಂಡು ರಸ್ತೆ ಬದಿ ಬಿದ್ದ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಬೃಹತ್ ಚೀಲಕ್ಕೆ ಹಾಕಿ ಮಾರಾಟ ಮಾಡುತ್ತಾರೆ.

‘ಹಿಂದೆ ವಾಹನ ಇರಲಿಲ್ಲ. ಹಗರೆ ಸುತ್ತಮುತ್ತ ಪ್ಲಾಸ್ಟಿಕ್ ಎರುಕುತ್ತಿದ್ದೇವು. ಎರಡು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನವನ್ನು ಖರೀದಿಸಿದ್ದು, ಎರಡು ವರ್ಷಗಳಿಂದ ಚನ್ನರಾಯಪಟ್ಟಣದಿಂದ ಧರ್ಮಸ್ಥಳದವರೆಗೂ ಪ್ಲಾಸ್ಟಿಕ್ ಬಾಟಲಿ ಎರುಕುತ್ತೇವೆ. ಹೋದ ವರ್ಷಕ್ಕಿಂತ ಈ ಬಾರಿ ಜಾಸ್ತಿ ಬಾಟಲಿ‌ ಸಿಕ್ಕಿವೆ. ನೀರಿನ ಬಾಟಲಿ ಹಾಗೂ ಇತರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಎಲ್ಲಾ ಮುಗಿದ ಮೇಲೆ ಬೆಂಗಳೂರಿಗೆ ಸಾಗಿಸಿ ಅಲ್ಲಿ ಮಾರಾಟ ಮಾಡುತ್ತೇವೆ. ಶಿವರಾತ್ರಿಗೆ ಹದಿನೈದು ದಿನಗಳಿದ್ದಂತೆ ಮನೆ‌ಬಿಟ್ಟು ಪ್ಲಾಸ್ಟಿಕ್ ಸಂಗ್ರಹದಲ್ಲಿ ತೊಡಗುತ್ತೇವೆ. ರಸ್ತೆಯಲ್ಲಿ ನೀಡುವ ಅನ್ನದಾನಗಳಲ್ಲಿ ಊಟ ಮಾಡಿಕೊಳ್ಳುತ್ತೇವೆ. ಅಲ್ಲಲ್ಲಿ ಸಂಗ್ರಹಿಸಿದ ಬ್ಯಾಗ್‌ಗಳನ್ನು ‌ಇಟ್ಟಿರುತ್ತೇವೆ. ಎಲ್ಲಾ ಮುಗಿದ ಮೇಲೆ ಊರಿಗೆ ಒಯ್ಯುತ್ತೇವೆ. ಈ ಬಾರಿ ಸಾವಿರ ಕೆ.ಜಿಗೂ ಅಧಿಕ ಬಾಟಲಿ ಸಿಕ್ಕಿರಬಹುದು. ಬೆಂಗಳೂರಿನ‌ ಉದ್ಯಮಿಯೊಬ್ಬರು ಇಲ್ಲಿಗೆ ಬಂದು ಖರೀದಿಸುವ ಬಗ್ಗೆ ತಿಳಿಸಿದ್ದಾರೆ. ಸ್ಥಳೀಯವಾಗಿ ಕೆ.ಜಿಗೆ ₹13 ಇದೆ. ಬೆಂಗಳೂರಿನಲ್ಲಿ ₹18ರಿಂದ ₹21 ವರೆಗೂ ಖರೀದಿಸುತ್ತಾರೆ. ಈಗ ಹೇಳಿರುವ ಉದ್ಯಮಿ ಎಷ್ಟಕ್ಕೆ ಖರೀದಿಸುತ್ತಾರೆ ಎಂಬುದರ ಮೇಲೆ ಎಲ್ಲಿ ಮಾರಾಟ ಮಾಡುವುದು ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ಸತೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಪ್ಲಾಸ್ಟಿಕ್ ಸಂಗ್ರಹದ ಕಾಯಕದಲ್ಲಿ ತೊಡಗಿರುವ ಸತೀಶ್ ಕುಟುಂಬವು ತಮಗರಿವಿಲ್ಲದಂತೆ ಪರಿಸರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದು, ಚಾರ್ಮಾಡಿಯ ಮಡಿಲು ಸೇರಬೇಕಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ತೆಗೆದು ಮಾಲಿನ್ಯ ತಡೆಯಲು ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.