ADVERTISEMENT

ಕಳಸ| ಗುಹೆಯಿಂದ ಗಿರಿಜನ ಕುಟುಂಬದ ಸ್ಥಳಾಂತರ

ಬಲಿಗೆ: ಅಧಿಕಾರಿಗಳಿಂದ ತಾತ್ಕಾಲಿಕ ಟೆಂಟ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 4:16 IST
Last Updated 24 ಏಪ್ರಿಲ್ 2020, 4:16 IST
ಕಳಸ ಗ್ರಾಮ ಪಂಚಾಯಿತಿಯ ಬಲಿಗೆ ಸಮೀಪದ ಗುಹೆಯಲ್ಲಿ ವಾಸವಾಗಿದ್ದ ಅನಂತ ಅವರನ್ನು ಗುರುವಾರ ಅಲ್ಲಿಂದ ಸ್ಥಳಾಂತರ ಮಾಡುವಾಗ ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಸಂತೋಷ್ ಇದ್ದರು.
ಕಳಸ ಗ್ರಾಮ ಪಂಚಾಯಿತಿಯ ಬಲಿಗೆ ಸಮೀಪದ ಗುಹೆಯಲ್ಲಿ ವಾಸವಾಗಿದ್ದ ಅನಂತ ಅವರನ್ನು ಗುರುವಾರ ಅಲ್ಲಿಂದ ಸ್ಥಳಾಂತರ ಮಾಡುವಾಗ ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಸಂತೋಷ್ ಇದ್ದರು.   

ಕಳಸ: ಬಲಿಗೆ ಸಮೀಪದ ಗುಹೆಯಲ್ಲಿ ಗಿರಿಜನ ಕುಟುಂಬವೊಂದು ವಾಸ ಮಾಡುತ್ತಿರುವ ಕುರಿತು ‘ಪ್ರಜಾವಾಣಿ’ ಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಆ ಕುಟುಂಬವನ್ನು ಗುಹೆಯಿಂದ ಸ್ಥಳಾಂತರ ಮಾಡಿದರು.

ಮೂಡಿಗೆರೆ ತಹಶೀಲ್ದಾರ್ ಎಚ್.ಎಂ.ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಕಳಸ ಗ್ರಾಮ ಪಂಚಾಯಿತಿ ಸದಸ್ಯರು, ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯು ಗುಹೆಯಲ್ಲಿ ವಾಸವಾಗಿರುವ ಅನಂತ ಅವರನ್ನು ಭೇಟಿಯಾದರು.

ಗುಹೆಯಿಂದ ಹೊರಬಂದು ಬೇರೆ ಕಡೆ ವಾಸ ಮಾಡುವುದಾದರೆ ವ್ಯವಸ್ಥೆ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು. ಅದನ್ನು ವಿರೋಧಿಸಿದ ಅನಂತ, ‘ನಾನು ಇಲ್ಲೇ ಇರೋದು, ಎಲ್ಲಿಗೂ ಬರಲ್ಲ. ನನಗೆ ಏನೂ ಬೇಡ’ ಎಂದು ಹಠ ಹಿಡಿದರು.

ADVERTISEMENT

ಆ ನಂತರ ಅಧಿಕಾರಿಗಳು ಅವರ ಮನವೊಲಿಸಿ ಹೊರಗೆ ಕರೆತಂದರೂ, ಸ್ಥಳೀಯರ ವಿರುದ್ಧ ಬುಸುಗುಡುತ್ತನೇ ಇದ್ದರು. ಅವರ ಪತ್ನಿ ಮತ್ತು ಮಗಳು ಕೂಡ ಒಲ್ಲದ ಮನಸ್ಸಿನಿಂದಲೇ ಹೊರ ಬಂದರು. ಕುಟುಂಬವನ್ನು ಬಲಿಗೆಗೆ ಕರೆದುಕೊಂಡು ಬಂದು, ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡಲಾಯಿತು. ಹೊರನಾಡಿನ ಕೊಠಡಿಯೊಂದರಲ್ಲಿ ಈ ಕುಟುಂಬಕ್ಕೆ ಆಶ್ರಯ ನೀಡುವುದಾಗಿ ಕಂದಾಯ ಇಲಾಖೆ ತಿಳಿಸಿದೆ.

ಸಂಜೆ ವೇಳೆಗೆ ಶಾಸಕ ಕುಮಾರ ಸ್ವಾಮಿ ಮತ್ತು ಉಪ ವಿಭಾಗಾಧಿಕಾರಿ ನಾಗರಾಜ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಅನಂತ ಕುಟುಂಬಕ್ಕೆ ಮನೆ ನೀಡುವ ಬಗ್ಗೆ ಚರ್ಚಿಸಲಾಯಿತು.

‘ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸ್ಥಿತಿಯಲ್ಲಿ ಕುಟುಂಬವೊಂದು ಇದೆ ಎಂಬುದನ್ನು ನೋಡಿ ಅಚ್ಚರಿಯಾಯಿತು. ಗ್ರಾಮ ಪಂಚಾಯಿತಿ ಸದಸ್ಯರು ಈ ಕುಟುಂಬದ ಬಗ್ಗೆ ಯಾಕೆ ಮಾಹಿತಿ ನೀಡಿರಲಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್. ಪ್ರಭಾಕರ್ ಪ್ರಶ್ನಿಸಿದ್ದಾರೆ.

‘ಕಳಸ ಗ್ರಾಮ ಪಂಚಾಯಿತಿಯು ಅನಂತ ಅವರಿಗೆ ಮೂಲಸೌಕರ್ಯ ನೀಡಲು ಅನೇಕ ಬಾರಿ ಅವರಿದ್ದ ಪ್ರದೇಶಕ್ಕೆ ಭೇಟಿ ನೀಡಿದರೂ ಅವರ ಅಸಹಕಾರದಿಂದಾಗಿ ಮನೆ ನೀಡಲು ಸಾಧ್ಯವಾ ಗಿಲ್ಲ’ ಎಂದು ಗ್ರಾಮ ಪಂಚಾಯಿತಿ ತಿಳಿಸಿದೆ.

‘ಅನಂತ ಅವರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಅವರಿಗೆ ಮಾಹಿತಿ ನೀಡಿದರೂ ಅವರು ಆಸಕ್ತಿ ತೋರಲೇ ಇಲ್ಲ. ಕೆಲ ಕಾಲ ಊರಿನಲ್ಲಿ, ಕೆಲ ಕಾಲ ಕಾಡಿನಲ್ಲಿ ವಾಸ ಮಾಡುವ ಅಭ್ಯಾಸದ ಅವರು ಯಾವ ದಾಖಲೆಗಳನ್ನೂ ಪೂರೈಸದೇ ಇದ್ದುದರಿಂದ ಮನೆ ಮಂಜೂರು ಮಾಡಲು ಆಗಿಲ್ಲ. ಅವರು ನಾಗರಿಕ ಜೀವನಕ್ಕೆ ಬರುವುದಾದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.