ADVERTISEMENT

ತರೀಕೆರೆ: ಸಿಗದ ವಿದ್ಯುತ್‌ ಪರಿವರ್ತಕ: ರೈತರ ಆಕ್ರೋಶ

ಮೆಸ್ಕಾಂ ಜನಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 7:38 IST
Last Updated 22 ಸೆಪ್ಟೆಂಬರ್ 2025, 7:38 IST
ತರೀಕೆರೆ ಪಟ್ಟಣದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್ ಮಾತನಾಡಿದರು 
ತರೀಕೆರೆ ಪಟ್ಟಣದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್ ಮಾತನಾಡಿದರು    

ತರೀಕೆರೆ: ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ 72 ಗಂಟೆಯೊಳಗೆ ರೈತರಿಗೆ ಸಿಗುತ್ತಿಲ್ಲ. ಪವರ್‌ಮೆನ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ತುಂಡಾಗಿ ನೆಲಕ್ಕೆ ಬೀಳುತ್ತಿರುವ ಹಳೆಯ ವಿದ್ಯುತ್ ವೈರ್‌ಗಳನ್ನು ಬದಲಾಯಿಸುತ್ತಿಲ್ಲ. ಟಿ.ಸಿ ಸರಬರಾಜಿಗೆ ವಾಹನಗಳ ಕೊರತೆಯಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತರು ಮತ್ತು ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಗೈದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಮಾತನಾಡಿ, ಸುಟ್ಟ ಟಿ.ಸಿಗಳನ್ನು ದುರಸ್ತಿಪಡಿಸಿ 72 ಗಂಟೆಯೊಳಗೆ ರೈತರಿಗೆ ನೀಡಬೇಕು ಎಂಬ ನಿಯಮವನ್ನು ಮೆಸ್ಕಾಂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಿಪೇರಿಯಾದ ಟಿ.ಸಿಗಳನ್ನು ರೈತರು ತಮ್ಮ ಖರ್ಚಿನಲ್ಲಿಯೇ ತೆಗೆದುಕೊಂಡು ಹೋದರೂ ಕೂಡ, ಅಳವಡಿಸಲು ಸಿಬ್ಬಂದಿ ಬರುವುದಿಲ್ಲ. ಟಿಸಿ ತುಂಬಿದ್ದ ವಾಹನಕ್ಕಾಗಿ ವಾರಗಟ್ಟೆಲೆ ಕಾಯುವ ಪರಿಪಾಠವಿದೆ ಎಂದು ದೂರಿದರು.

ADVERTISEMENT

ರೈತ ಸಂತೋಷ್ ಮಾತನಾಡಿ, ದೋರನಾಳು ಭಾಗದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿವೆ. ಹಳೆಯ ವೈರ್ ಬದಲಾಯಿಸುವಂತೆ ಹಲವು ಬಾರಿ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಅವಘಡ, ಎಷ್ಟೊತ್ತಿಗೆ ನಡೆದಿದ್ದರೂ ಕೂಡ ಪವರ್‌ಮೆನ್‌ಗಳು ಬರುವುದು ಮಾತ್ರ ಬೆಳಿಗ್ಗೆ 10 ಗಂಟೆಗೆ ಎಂದು ದೂರಿದರು.

ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್ ಮಾತನಾಡಿ, ಸುಟ್ಟು ಹೋಗಿರುವ ಟಿ.ಸಿ.ಗಳನ್ನು ರಿಪೇರಿ ಮಾಡಿಸಿ ಬೀರೂರಿನಲ್ಲಿ ಇಡುವುದು ಬೇಡ. ದುರಸ್ತಿಯಾದ ಟಿ.ಸಿಗಳನ್ನು ರೈತರಿಗೆ ತುರ್ತಾಗಿ ವಿತರಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಚೇನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗುತ್ತಿದೆ. ವೋಲ್ಟೇಜ್ ಅವ್ಯವಸ್ಥೆಯಿಂದ ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಹಾನಿಯಾಗುತ್ತಿದೆ. ಈ ಭಾಗಕ್ಕೆ ಪ್ರತ್ಯೇಕ ಟಿ.ಸಿ ಅಳವಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳಿಯ ನಿವಾಸಿಗಳು ಮನವಿ ಮಾಡಿದರು.

ರೈತ ಮುಖಂಡರಾದ ಸುಣ್ಣದಹಳ್ಳಿ ಚಂದಪ್ಪ, ಹೊಸಳ್ಳಿ ತಾಂಡ್ಯದ ರಮೇಶ್‌ನಾಯ್ಕ, ಸುನಿಲ್ ಹಾಗೂ ಇತರರು ಸಭೆಯಲ್ಲಿ ಹಾಜರಿದ್ದು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್ ಲೋಕೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್,ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.