
ಚಿಕ್ಕಮಗಳೂರು: ರೈತರು ಕೇವಲ ಬೆಳೆ ಬೆಳೆಯಲು ಸೀಮಿತವಾಗದೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಲು ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ(ಕೆಪೆಕ್) ಅಧ್ಯಕ್ಷ ಬಿ.ಎಚ್. ಹರೀಶ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಳು ಮೆಣಸು ಮತ್ತಿತರೆ ಸಂಬಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಸೇರಿದಾಗ ಮಾತ್ರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಇದು ಕೇವಲ ರೈತರ ಅಭಿವೃದ್ಧಿಯಷ್ಟೇ ಅಲ್ಲ, ದೇಶದ ಒಟ್ಟಾರೆ ಆದಾಯದ ಹೆಚ್ಚಳಕ್ಕೂ ನೆರವಾಗಲಿದೆ ಎಂದರು.
ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕೆಂದರೆ ಮೌಲ್ಯವರ್ಧನೆಯಾಗಬೇಕು. ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ಉದ್ಯಮಿಗಳಾಗಿ ಹೊರ ಹೊಮ್ಮಬೇಕು’ ಎಂದರು.
500 ವರ್ಷಗಳ ಹಿಂದೆ ವಾಸ್ಕೋಡಗಾಮ ಭಾರತಕ್ಕೆ ಬಂದಾಗ ಇಲ್ಲಿನ ಮಸಾಲೆ ಪದಾರ್ಥಗಳಿಗೆ ಮಾರು ಹೋಗಿದ್ದರು. ಇಂದಿಗೂ ಕರಿ ಮೆಣಸು ವಿಶ್ವದಲ್ಲೇ ಅತ್ಯಂತ ಬೇಡಿಕೆ ಇರುವ ಅಮೂಲ್ಯ ಕೃಷಿ ಉತ್ಪನ್ನ ಎಂದು ಹೇಳಿದರು.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಆತಂಕ ಸದಾ ಇರುತ್ತದೆ. ಆದರೆ, ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿದರೆ ಮಾರುಕಟ್ಟೆಯಲ್ಲಿ ಇರುವ ಬೆಲೆಗಿಂತ ಹೆಚ್ಚಿನ ಲಾಭವನ್ನು ರೈತರೇ ನೇರವಾಗಿ ಪಡೆಯಲು ಸಾಧ್ಯವಿದೆ. ಇಂದು ಮುಕ್ತ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ನಮ್ಮ ಉತ್ಪನ್ನಗಳನ್ನು ವಿಶ್ವದ ಯಾವುದೇ ದೇಶಕ್ಕೆ ರಫ್ತು ಮಾಡಬಹುದು ಎಂದು ತಿಳಿಸಿದರು.
ಕೆಫೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಮಾತನಾಡಿ, ‘ನಿರುದ್ಯೋಗ ಮತ್ತು ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಂತಹ ಪ್ರಮುಖ ವಿಷಯಗಳ ಬಗ್ಗೆ ಜಿಲ್ಲಾಡಳಿತ ಕಾಳಜಿ ವಹಿಸುತ್ತಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ‘ಪದವಿ ಮುಗಿಸಿದ ನಂತರ ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯಮಶೀಲರಾಗಿ ಇತರರಿಗೆ ಕೆಲಸ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂಬುದು ಇಂದಿನ ಕಾಲದ ಅನಿವಾರ್ಯ’ ಎಂದರು.
ಕೃಷಿ ಜಂಟಿ ನಿರ್ದೇಶಕ ತಿರುಮಲೇಶ್ ಮಾತನಾಡಿ, ‘ರೈತರು ಬೆಳೆದ ಬೆಳೆಗಳನ್ನು ಕೇವಲ ಕಚ್ಚಾ ರೂಪದಲ್ಲಿ ಮಾರಾಟ ಮಾಡದೆ, ಅವುಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಈ ಹಿಂದೆ ರಾಗಿ ಕೇವಲ ಮುದ್ದೆ ಅಥವಾ ರೊಟ್ಟಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಇಂದು ರಾಗಿಯಿಂದ ತಯಾರಿಸಿದ ಬೇಕರಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ’ ಎಂದು ತಿಳಿಸಿದರು.
ಸಂಬಾರ ಪದಾರ್ಥಗಳಿಗೆ ವಿಶ್ವಮಟ್ಟದ ಬೇಡಿಕೆ
ಸಂಬಾರು ಪದಾರ್ಥ ಬೆಳೆಗಾರರಿಗೆ ಅನುಕೂಲವಾಗುವಂತೆ ಸಂಬಾರ ಮಂಡಳಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಉಪಯೋಗವನ್ನು ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಸಂಬಾರು ಮಂಡಳಿ ನಿವೃತ್ತ ಉಪನಿರ್ದೇಶಕ ಜೆ.ಕೆ. ವಿದ್ಯಾಶಂಕರ್ ತಿಳಿಸಿದರು.
‘ಕಾಳುಮೆಣಸು ಮತ್ತು ಇತರೆ ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆ ಮೂಲಭೂತ ಅವಶ್ಯಕತೆಗಳ ಪರಿಚಯ ಕುರಿತು’ ಮಾತನಾಡಿದ ಅವರು ಭಾರತದಲ್ಲಿ ಬೆಳೆಯುವ ಸಂಬಾರು ಪದಾರ್ಥಗಳು ಗುಣಮಟ್ಟದಿಂದ ಕೂಡಿವೆ. ಇಲ್ಲಿನ ಸಂಬಾರು ಪದಾರ್ಥಗಳಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ. ಇಲ್ಲಿಂದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ 34 ಲಕ್ಷ ಟನ್ ಸಂಬಾರು ಪದಾರ್ಥಗಳು ರಫ್ತಾಗುತ್ತಿದೆ ಎಂದು ಹೇಳಿದರು. ಹೊಸ ಆವಿಷ್ಕಾರ ಮತ್ತು ಹೊಸ ರುಚಿಯ ಪದಾರ್ಥಗಳು ಮಾರುಕಟ್ಟೆಗೆ ಬಂದಾಗ ಜನರು ಹೆಚ್ಚು ಬಳಕೆಗೆ ಮುಂದಾಗುತ್ತಾರೆ. ಆಗ ಸಂಬಾರು ಪದಾರ್ಥಗಳನ್ನು ಬೆಳೆದ ರೈತರಿಗೂ ಲಾಭದಾಯಕ ಆಗುತ್ತದೆ ಎಂದು ಅಭಿಪ್ರಾಯಿಸಿದರು. ಭಾರತದಲ್ಲಿ 180ಕ್ಕೂ ಹೆಚ್ಚು ಸಂಬಾರು ಪದಾರ್ಥ ಬೆಳೆಯಲಾಗುತ್ತಿದ್ದು ಚೈನಾ ಅಮೆರಿಕಾ ಬಾಂಗ್ಲಾದೇಶ ನೇಪಾಳ ಭೂತಾನ್ ಸೇರಿ ಶ್ರೀಮಂತ ದೇಶಗಳು ಬಡ ದೇಶಗಳಿಗೂ ಸಂಬಾರು ಪದಾರ್ಥ ರಫ್ತಾಗುತ್ತಿದೆ ಎಂದರು.
ಕಾಳುಮೆಣಸು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಕೇರಳ ಕಲ್ಲಿಕೋಟೆಯ ಐಐಎಸ್‌ಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಝಕಾರಿಯಾ ಟಿ. ಅವರು ಆನ್‌ಲೈನ್ ಮೂಲಕ ಉಪನ್ಯಾಸ ನೀಡಿ ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಉತ್ತಮ ಬೇಡಿಕೆ ಇದೆ. ಕಾಳು ಮೆಣಸು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಬೆಳೆಗಾರರು ಮಾರಾಟಕ್ಕೆ ಮುಂದಾದರೇ ಹೆಚ್ಚಿನ ಲಾಭಗಳಿಸಲು ಸಾಧ್ಯ’ ಎಂದರು.
ಕಾಳುಮೆಣಸಿನಲ್ಲಿ ಅನೇಕ ತಳಿಗಳಿದ್ದು ಬೆಳೆಗಾರರು ಉತ್ಕೃಷ್ಟ ಗುಣಮಟ್ಟದ ಕಾಳುಮೆಣಸು ಬೆಳೆಯಲು ಆದ್ಯತೆ ನೀಡಬೇಕು. ಬಿಳಿ ಕಾಳುಮೆಣಸು ಕಪ್ಪು ಕಾಳುಮೆಣಸು ಹಸಿರು ಕಾಳುಮೆಣಸು ಮೂರು ವಿಧದಲ್ಲಿ ವಿಂಗಡಿಸಲಾಗುತ್ತದೆ. ರೈತರು ಕಾಳುಮೆಣಸು ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದಾಗ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು.
ಅಡಿಕೆ ತೋಟಗಳಲ್ಲಿ ಅಂತರ್ ಬೆಳೆಯಾಗಿ ಕಾಳುಮೆಣಸು ಕೊಯ್ಲು ಪ್ರಕ್ರಿಯೆ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ವಿಷಯದ ಕುರಿತು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ನಾಗರಾಜಪ್ಪ ಅಡಿವೆಪ್ಪರ್ ಸಂಬಾರು ಬೆಳೆಗಳಾದ ಜಾಯಿಕಾಯಿ ಏಲಕ್ಕಿ ಲವಂಗ ವೆನಿಲ್ಲಾ ಕೋಕಮ್ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಸಾಮರ್ಥ್ಯ ಕುರಿತು ಸಂಬಾರು ಮಂಡಳಿ ಸಕಲೇಶಪುರ ಪ್ರಾಂತೀಯ ಕಚೇರಿ ಉಪನಿರ್ದೇಶಕ ಎಸ್.ಕುಮಾರ್ ಸಂಬಾರು ಬೆಳೆಗಳ ರಫ್ತು ಪ್ರಕ್ರಿಯೆಯಲ್ಲಿ ಪ್ಯಾಕೇಜಿಂಗ್‌ನ ಮಹತ್ವ(ಆನ್‌ಲೈನ್) ಕುರಿತು ಆಹಾರ ಪ್ಯಾಕೇಜಿಂಗ್ ಮತ್ತು ಸಂಗ್ರಹಣಾ ತಂತ್ರಜ್ಞಾನ ವಿಭಾಗದ ಎಸ್.ಆನಂದಕುಮಾರ್ ಸಂಬಾರು ಪದಾರ್ಥಗಳ ರಫ್ತು ಪ್ರಕ್ರಿಯೆಯಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೇಟಿಂಗ್ ಅವಶ್ಯಕತೆ ಕುರಿತು ಎಂ.ಎಸ್.ಜಿತೇಂದ್ರ ಸಂಬಾರು ಉತ್ಪನ್ನಗಳ ವ್ಯವಹಾರ ಕ್ಷೇತ್ರದ ಯಶಸ್ವಿ ಉದ್ಯಮಿಯೊಂದಿಗೆ ಸಂವಾದವನ್ನು ಶಿರಸಿಯ ಕದಂಬ ಮಾರುಕಟ್ಟೆ ಸೌಹಾರ್ದ ಸಹಕಾರ ಸಂಘದ ವಿಶ್ವೇಶ್ವರ ಭಟ್ ನಡೆಸಿಕೊಟ್ಟರು.
₹9 ಲಕ್ಷ ಸಹಾಯಧನ
ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯದಲ್ಲಿ 9 ಸಾವಿರ ಘಟಕಗಳಿಗೆ ಸಬ್ಸಿಡಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಇದಾಗಿದ್ದು ಘಟಕ ನಿರ್ಮಾಣಕ್ಕೆ ₹15 ಲಕ್ಷ ₹9 ಲಕ್ಷ ಸಹಾಯಧನ ನೀಡಲಾಗುವುದು ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದರು.
ಘಟಕ ನಿರ್ಮಾಣದ ಬಳಿಕ ಕಚ್ಛಾವಸ್ತುಗಳು ಅದಕ್ಕೆ ಬೇಕಾದ ಯಂತ್ರೋಪಕರಣಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೆಪೆಕ್ ಸಹಭಾಗಿತ್ವದಲ್ಲಿ ಕಾಳುಮೆಣಸು ಸಂಸ್ಕರಣ ಘಟಕವನ್ನು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಾಳುಮೆಣಸು ಶುದ್ಧೀಕರಣ ಕಾಳುಮೆಣಸು ಪೌಡರ್ ಪ್ಯಾಕೇಟ್ ಹಾಗೂ ಶೀಥಲ ಘಟಕವನ್ನು ಕೂಡ ಇಲ್ಲಿ ನಿರ್ಮಾಣ ಮಾಡಲಾಗಿದೆ. ಬೆಳೆಗಾರರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.