ADVERTISEMENT

ರಸಗೊಬ್ಬರ ಕೊರತೆ: ಪೂರೈಕೆಗೆ ಕೃಷಿಕರ ಆಗ್ರಹ

ಟೋಕನ್ ಮೂಲಕ ರೈತರಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 14:16 IST
Last Updated 27 ಜೂನ್ 2022, 14:16 IST
ರಸಗೊಬ್ಬರ 
ರಸಗೊಬ್ಬರ    

ಸಂಗಮೇಶ್ವರಪೇಟೆ (ಬಾಳೆಹೊನ್ನೂರು): ಮುಂಗಾರು ಹಂಗಾಮು ಆರಂಭಗೊಂಡಿದ್ದು ಕೃಷಿಕರಿಗೆ ಅಗತ್ಯವಾದ ರಸಗೊಬ್ಬರ ಪೂರೈಕೆ ಸ್ಥಗಿತಗೊಂಡ ಕಾರಣ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.

ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಅಡಿಕೆ, ಕಾಫಿ ಬೆಳೆಗಳಿಗೆ ಯೂರಿಯಾ, ಪೊಟ್ಯಾಷ್, ರಾಕ್ ಸೇರಿದಂತೆ ಕೃಷಿಕರಿಗೆ ಅಗತ್ಯವಾದ ರಸಗೊಬ್ಬರ ನೀಡುವುದು ವಾಡಿಕೆ. ಆದರೆ, ಈ ವರ್ಷ ನಿಗದಿತ ಪ್ರಮಾಣದಲ್ಲಿ ಗೊಬ್ಬರದ ಪೂರೈಕೆಯಾಗದಿದ್ದರಿಂದ ರೈತರು ನಿತ್ಯ ಗೊಬ್ಬರದ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ.

ಇಲ್ಲಿನ ಪಿಎಸಿಎಸ್ ಸಂಸ್ಥೆಗೆ ಭಾನುವಾರ ಮೂರು ಲೋಡ್‌ಗಳಷ್ಟು ಗೊಬ್ಬರ ಬಂದಿತ್ತು. ವಿಷಯ ತಿಳಿದ ರೈತರು ಒಂದೇ ಬಾರಿ ತೆರಳಿದ್ದರಿಂದ ತಲಾ 15-20 ಮೂಟೆಗಳನ್ನು ಟೋಕನ್ ಮೂಲಕ ವಿತರಿಸಲಾಯಿತು. ನೋಡ ನೋಡುತ್ತಿದ್ದಂತೆ ಮೂರು ಲೋಡ್ ಗೊಬ್ಬರ ಖಾಲಿಯಾಗಿದೆ.

ADVERTISEMENT

‘ಜಿಲ್ಲೆಯಲ್ಲೇ ಅತಿಹೆಚ್ಚು ರಸಗೊಬ್ಬರ ಇಲ್ಲಿನ ಪಿಎಸಿಎಸ್ ಮಳಿಗೆಯಲ್ಲಿ ಮಾರಾಟವಾಗುತ್ತಿದೆ. ಪ್ರತಿ ವರ್ಷ ಇಲ್ಲಿ ಸುಮಾರು 6,500 ಟನ್ ಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ರೈತರಿಗೆ ಸುಮಾರು ₹ 3 ಕೋಟಿಯ ಗೊಬ್ಬರ ಸಾಲ ನೀಡಲಾಗುತ್ತಿದೆ. ಆದರೆ, ಈ ಬಾರಿ ಇದೂವರೆಗೆ ಕೇವಲ 1500 ಟನ್ ಗೊಬ್ಬರ ಮಾತ್ರ ಪೂರೈಕೆ ಮಾಡಿದೆ. ಬೇಡಿಕೆಯಷ್ಟು ಗೊಬ್ಬರವನ್ನು ಸರ್ಕಾರ ನೀಡುತ್ತಿಲ್ಲ. ಕೃಷಿ ಅಧಿಕಾರಿಗಳೂ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಇದರ ನಡುವೆ ಒಬ್ಬ ಕೃಷಿಕನಿಗೆ ಕೇವಲ 50 ಮೂಟೆ ಮಾತ್ರ ಯೂರಿಯಾ ನೀಡಬೇಕು ಎಂಬ ಆದೇಶ ಬಂದಿದೆ. ಇದು ಸರಿಯಲ್ಲ’ ಎನ್ನುತ್ತಾರೆ ಸಂಗಮೇಶ್ವಪೇಟೆ ಪಿಎಸಿಎಸ್ ಅಧ್ಯಕ್ಷ ಎಚ್.ಎಲ್.ಚಂದ್ರೇಗೌಡ.

‘ಸಕಾಲದಲ್ಲಿ ಗಿಡಗಳಿಗೆ ಗೊಬ್ಬರ ಹಾಕದಿದ್ದಲ್ಲಿ ಮುಂದಿನ ಬಾರಿಯ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಪಿಎಸಿಎಸ್ ಮಳಿಗೆಗೆ ಸರ್ಕಾರ ನ್ಯಾನೋ ಯೂರಿಯ ಪೂರೈಕೆ ಮಾಡಿದೆ. ಅದನ್ನು ಕಾಫಿ ತೋಟಕ್ಕೆ ಬಳಸಲು ಸಾಧ್ಯವೇ? ಯೂರಿಯಾಗೆ ಸರ್ಕಾರ ಅತಿ ಹೆಚ್ಚಿನ ಸಹಾಯಧನ ನೀಡುತ್ತಿದೆ. ಅದನ್ನು ತಪ್ಪಿಸಲು ರೈತರಿಗೆ ಇಂತಿಷ್ಟು ಮೂಟೆ ಎಂದು ನಿಗದಿ ಪಡಿಸಿದ್ದು ಸರಿಯಲ್ಲ. ತಕ್ಷಣ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡಬೇಕು’ ಎಂದು ಕಾಫಿ ಬೆಳೆಗಾರ ನಾಬರ್ಟ ಪಿಂಟೊ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.