ಚಿಕ್ಕಮಗಳೂರು: ನಗರಸಭೆ ಆವರಣಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಆಹಾರ ಮಳಿಗೆ(ಫುಡ್ ಕೋರ್ಟ್) ಕಾಮಗಾರಿ ಪೂರ್ಣಗೊಂಡಿದ್ದು, ಹರಾಜು ಪ್ರಕ್ರಿಯೆಗೆ ಕಾದು ನಿಂತಿದೆ. ಇದರಿಂದಾಗಿ ತಳ್ಳುವ ಗಾಡಿಗಳು ರಸ್ತೆಯಲ್ಲೇ ನಿಲ್ಲುವುದು ತಪ್ಪಿಲ್ಲ.
ನಗರಸಭೆ ಕಚೇರಿ ಹಿಂಭಾಗದ ಖಾಲಿ ಜಾಗದಲ್ಲಿ ಬೇಲೂರು ರಸ್ತೆಗೆ ಪ್ರವೇಶ ದ್ವಾರ ಕಲ್ಪಿಸಿ ಆಹಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗುವಂತೆ ಫುಡ್‌ಕೋರ್ಟ್ ನಿರ್ಮಿಸಲಾಗಿದೆ. ₹3.4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಳಿಗೆ ನಿರ್ಮಾಣವಾಗಿದೆ. ಆದರೆ, ಸಾರ್ವಜನಿಕರಿಗೆ ಲಭ್ಯವಾಗಲು ಇನ್ನಷ್ಟು ದಿನ ಕಾಯಬೇಕಿದೆ.
ಫುಡ್‌ಕೋರ್ಟ್ ಆವರಣದ ನಾಲ್ಕು ಕಡೆ ಮಳಿಗೆ ನಿರ್ಮಿಸಿ ಮಧ್ಯ ಭಾಗದಲ್ಲಿ ಖಾಲಿ ಜಾಗ ಉಳಿಸಲಾಗಿದೆ. ಈ ಜಾಗದಲ್ಲಿ ಇಂಟರ್‌ಲಾಕ್ ಇರುವ ಪ್ರಾಂಗಣ ನಿರ್ಮಿಸಲಾಗಿದೆ. ಹೈಟೆಕ್ ಶೌಚಾಲಯ, ಫೌಂಟೆನ್ ನಿರ್ಮಿಸಲಾಗಿದೆ. ಮೊದಲೇ ಇದ್ದ ಮರಗಳನ್ನು ಕಡಿಯದೆ ಅದರ ಸುತ್ತಲೂ ಫೌಂಟೆನ್ ರೀತಿ ಕಟ್ಟೆಗಳನ್ನು ಕಟ್ಟಲಾಗಿದೆ. ಮರದ ಕೆಳಗಿನ ಕಟ್ಟೆಗಳ ಮೇಲೆ ಕುಳಿತು ಆಹಾರ ಸೇವನೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
46 ಮಳಿಗೆಗಳು ನಿರ್ಮಾಣವಾಗಿದ್ದು, ಬೇಲೂರು ರಸ್ತೆಯ ಒಂದು ಬದಿಯಲ್ಲಿ, ಆಜಾದ್ ಪಾರ್ಕ್ ಸುತ್ತಮುತ್ತ, ನಗರಸಭೆ ಸುತ್ತಮುತ್ತ ರಸ್ತೆ ಬದಿಯಲ್ಲಿ ನಿಲ್ಲುವ ತಳ್ಳುವ ಗಾಡಿಗಳನ್ನು ಸ್ಥಳಾಂತರ ಮಾಡುವುದು ಈ ಆಹಾರ ಮಳಿಗೆ ನಿರ್ಮಾಣದ ಉದ್ದೇಶ. ಕುಡಿಯುವ ನೀರು ಸೇರಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮಳಿಗೆ ಬಿಟ್ಟುಕೊಡಲು ನಗರಸಭೆ ತಯಾರಿ ನಡೆಸಿದೆ.
ಯೋಜನೆಯಂತೆ 2023ರ ನವೆಂಬರ್‌ನಲ್ಲೇ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಬೇಕಿತ್ತು. ಕುಂಟುತ್ತಾ ಸಾಗಿದ್ದ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತು. ನಂತರ 2023ರ ಜುಲೈನಲ್ಲಿ ಮತ್ತೆ ಆರಂಭವಾಗಿ ಈಗ ಪೂರ್ಣಗೊಂಡಿದೆ. ಆದರೆ, ಬಾಗಿಲು ಬಂದ್ ಮಾಡಿ ಪಾಳು ಬಿಡಲಾಗಿದೆ.
ಮಳಿಗೆಗಳನ್ನು ಹರಾಜು ಮಾಡಿ ಆಸಕ್ತರಿಗೆ ವಿತರಣೆ ಮಾಡುವುದು ನಗರಸಭೆಯ ಉದ್ದೇಶ. ರಸ್ತೆ ಬದಿಯಲ್ಲಿ ನಿಲ್ಲುವ ಚಾಟ್ಸ್ ಮತ್ತು ಉಪಾಹಾರ ಒಂದೇ ಆವರಣದಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡಲು ಈ ಕಾಮಗಾರಿ ಕೈಗೊಂಡಿತ್ತು. ಆದರೆ, ಹರಾಜು ಪ್ರಕ್ರಿಯೆ ವಿಳಂಬ ಆಗಿರುವುದರಿಂದ ಆಹಾರ ಮಳಿಗೆಗಳು ಸಾರ್ವಜನಿಕರಿಗೆ ಲಭ್ಯವಿಲ್ಲದಂತಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.