ಚಿಕ್ಕಮಗಳೂರು: ಪರಿಭಾವಿತ ಅರಣ್ಯ ಪಟ್ಟಿ ಪರಿಷ್ಕರಿಸಲು ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ತಿಳಿಸಿದರು.
ಕಂದಾಯ ಸಚಿವರು, ಅರಣ್ಯ ಸಚಿವರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಜಿಲ್ಲಾ ಮಟ್ಟದಲ್ಲಿ ಎಫ್‌ಎಸ್‌ಒಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅನುಷ್ಠಾನ ಮಾಡುತ್ತಿಲ್ಲ. ಮೂರು ತಿಂಗಳಾದರೂ ಕುಳಿತಲ್ಲೇ ವರದಿ ಸಿದ್ಧಪಡಿಸಲು ಚಿಂತನೆ ನಡೆಸಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಪರಿಭಾವಿತ ಅರಣ್ಯದ ಪರಿಷ್ಕೃತ ವರದಿಯನ್ನು ನವೆಂಬರ್ ವೇಳೆಗೆ ಸಲ್ಲಿಸಬೇಕಿದೆ. ಇನ್ನೊಂದು ತಿಂಗಳು ಬಾಕಿ ಇದ್ದು ಪರಿಭಾವಿತ ಅರಣ್ಯ, ರೈತರ ಸಾಗುವಳಿ, 94–ಸಿ ಅರ್ಜಿ, ಗ್ರಾಮ, ಸ್ಮಶಾನ, ಶಾಲೆ, ಅಂಗನವಾಡಿ ರೀತಿಯ ಸಾರ್ವಜನಿಕ ಅವಶ್ಯಕತೆಗಳ ಜತೆಗೆ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಬೇಕು. ಇವುಗಳನ್ನು ಬಿಟ್ಟು ಪರಿಭಾವಿತ ಅರಣ್ಯದ ಹೊಸಪಟ್ಟಿ ಸಿದ್ಧಪಡಿಸಬೇಕು ಎಂದರು.
ಗ್ರಾಮ ಆಡಳಿತಾಧಿಕಾರಿ, ಕಂದಾಯ ಅಧಿಕಾರಿ ಮತ್ತು ಇತರ ಸಿಬ್ಬಂದಿ ನೇಮಿಸಿ ನಿಖರವಾದ ಕಂದಾಯ ಬಳಕೆಯ ಭೂಮಿ ಗುರುತಿಸಬೇಕು ಎಂದು ಒತ್ತಾಯಿಸಿದರು.
ದರಖಾಸ್ತು ಜಮೀನು, ಪೋಡಿ ಸಮಸ್ಯೆ ಕಾಡುತ್ತಿದೆ. ಶೀಘ್ರದಲ್ಲಿ ಪೋಡಿ ಅಂತಿಮಗೊಳಿಸಬೇಕು. ಮಲೆನಾಡಿನ ಭೂಮಿಯ ಏರಿಳಿತಕ್ಕೆ ತಕ್ಕಂತೆ ನೇರಮಾರ್ಗ ಅಂತರವನ್ನು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಏರಿಯಲ್ ಅಂತರ ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಸಮಿತಿಯ ಸಂಚಾಲಕ ಕೆ.ಕೆ.ರಘು, ಪೂರ್ಣೇಶ್ ಮೈಲಿಮನೆ, ಈಶ್ವರ್, ಶಂಕರಕುಮಾರ್, ಕಳಸಪ್ಪ, ಕುಮಾರಸ್ವಾಮಿ, ರವಿಕುಮಾರ್, ಬೆನಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.