ADVERTISEMENT

ಮುಂದಿನ ವರ್ಷದಿಂದ ಉಚಿತ ನೋಟ್ ಬುಕ್: ಸಚಿವ ಮಧು ಬಂಗಾರಪ್ಪ

ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಪಾಲ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:59 IST
Last Updated 6 ಡಿಸೆಂಬರ್ 2025, 6:59 IST
ಬಾಳೆಹೊನ್ನೂರು ಸಮೀಪದ ಮೇಲ್ಪಾಲ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಉದ್ಘಾಟಿಸಿದರು
ಬಾಳೆಹೊನ್ನೂರು ಸಮೀಪದ ಮೇಲ್ಪಾಲ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಉದ್ಘಾಟಿಸಿದರು   

ಮೇಲ್ಪಾಲ್(ಬಾಳೆಹೊನ್ನೂರು): ಮುಂದಿನ ಶೈಕ್ಷಣಿಕ ವರ್ಷದಿಂದ ಒಂದರಿಂದ ಹನ್ನೆರಡನೇ ತರಗತಿ ತನಕ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪಠ್ಯ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಪಾಲ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿದ್ದು, ಅನುದಾನಿತ ಸೇರಿ ಒಟ್ಟು 57 ಸಾವಿರ ಶಾಲೆಗಳಿವೆ. 57 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ರಾಜ್ಯದ ಶೇ40 ರಷ್ಟು ನೌಕರರು ಶಿಕ್ಷಣ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ದೇವಸ್ಥಾನಗಳಿಗೆ ಹಣ ಕೊಡುವುದರಿಂದ ಭಾವನಾತ್ಮಕ ಪ್ರಯೋಜನ ಸಿಗಬಹುದು. ಅದನ್ನೇ ಶಿಕ್ಷಣಕ್ಕೆ ನೀಡಿದರೆ ಲಕ್ಷಾಂತರ ಮಕ್ಕಳ ಭವಿಷ್ಯ  ರೂಪುಗೊಳ್ಳಲಿದೆ. ಸಹಜವಾಗಿಯೇ ದೇಶವೂ ಉದ್ಧಾರವಾಗುತ್ತದೆ ಎಂಬ ನಂಬಿಕೆ ನನ್ನದು. ಶಿಕ್ಷಕರು, ಕೊಠಡಿ ಸೇರಿ ಕೆಲವು ಮೂಲ ಸೌಕರ್ಯ ಸಮಸ್ಯೆಗಳಿವೆ.  ಹಂತ–ಹಂತವಾಗಿ ಶಾಶ್ವತ ಪರಿಹಾರ ರೂಪಿಸುವ ಜವಾಬ್ದಾರಿ ನಿರ್ವಹಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಹಿಂದಿನ ಸರಕಾರ ಕೇವಲ 4786 ಶಿಕ್ಷಕರ ನೇಮಕಾತಿ ಮಾಡಿದ್ದು, ನಮ್ಮ ಸರ್ಕಾರ ಅದನ್ನು 13 ಸಾವಿರಕ್ಕೆ ಏರಿಕೆ ಮಾಡಿದೆ. ಡಿ. 7ಕ್ಕೆ ಪರೀಕ್ಷೆಗೆ ಇದ್ದು, 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಶಾಸಕ ಟಿ.ಡಿ.ರಾಜೇಗೌಡ, ಶಿವಮೊಗ್ಗದ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಬಿ.ಕಣಬೂರು ಗ್ರಾ.ಪಂ. ಸದಸ್ಯ ಮಹಮದ್ ಹನೀಫ್, ಕರ್ಕೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೇಶವತ್ತಿ, ಉಪಾಧ್ಯಕ್ಷೆ ಆಶಾಲತಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಮತಾ‌, ಕೊಪ್ಪ ತಾಲ್ಲೂ ಪಂಚಾಯಿತಿ ಇಒ ಎಚ್.ಡಿ.ನವೀನಕುಮಾರ್, ಪಿಎಸಿಎಸ್ ಅಧ್ಯಕ್ಷ ಪ್ರಕಾಶಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಗ್ಯಾರಂಟಿ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷೆ ಚಂದ್ರಮ್ಮ, ಬಿಇಒ ಶಬನಾ ಅಂಜುಮ್, ಪಿಡಿಒ ಜೋಸೆಫ್, ಬಿ.ಆರ್.ಸ್ವಪ್ನ, ಶಿಕ್ಷಕ ರಾಘವೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.