ADVERTISEMENT

ಗಡಿಗಿರಿಯಾಪುರದ 8 ಮಂದಿಗೆ ಕೋವಿಡ್

ವಧು ನೋಡಲು ಭದ್ರಾವತಿಯಿಂದ ತುಮಕೂರಿಗೆ ತೆರಳಿ ವಾಪಸಾದವರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:29 IST
Last Updated 30 ಜೂನ್ 2020, 16:29 IST

ಚಿಕ್ಕಮಗಳೂರು/ ಅಜ್ಜಂಪುರ: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗಡಿಗಿರಿಯಾಪುರದ ಎರಡು ಸಹೋದರ ಕುಟುಂಬಗಳ ಎಂಟು ಮಂದಿಗೆ ಕೋವಿಡ್‌ –19 ಪತ್ತೆಯಾಗಿದೆ. ಎಂಟು ಮಂದಿ ಭದ್ರಾವತಿಗೆ ಹೋಗಿ ಅಲ್ಲಿಂದ ತುಮಕೂರಿಗೆ ತೆರಳಿ ವಧು ನೋಡುವ ಕಾರ್ಯ ಮುಗಿಸಿಕೊಂಡು ಊರಿಗೆ ವಾಪಸಾಗಿದ್ದರು.

ಗಡಿಗಿರಿಯಾಪುರ ಗ್ರಾಮವನ್ನು ಕಂಟೈನ್ಮೆಟ್‌ ವಲಯವನ್ನಾಗಿ ಘೋಷಿಸಲಾಗಿದೆ. ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಸೋಂಕು ಪತ್ತೆಯಾಗಿರುವವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ.

‘ಎರಡು ಕುಟುಂಬಗಳ ಎಂಟು ಮಂದಿ ಭದ್ರಾವತಿಗೆ ಹೋಗಿ, ಅಲ್ಲಿಂದ ವಧು ನೋಡಲು ತುಮಕೂರಿಗೆ ಹೋಗಿ ವಾಪಸಾಗಿದ್ದರು. ಅವರಿಗೆ ಕೋವಿಡ್‌–19 ದೃಢಪಟ್ಟಿದೆ’ ಎಂದು ಗಡಿಗಿರಿಯಾಪುರ ಗ್ರಾಮಸ್ಥ ಬಸವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ ಈವರೆಗೆ 17 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಶಿವನಿ, ಹಿರೇಕಾನವಂಗಲ, ಕಾಟಿಗನೆರೆಯಲ್ಲಿ ತಲಾ ಒಂದು ಗಡಿ ಗಿರಿಯಾಪುರದಲ್ಲಿ ಎಂಟು, ನಾರಾಣಪುರದ ನಾಲ್ವರಿಗೆ ದೃಢಪಟ್ಟಿವೆ. ಗಡಿಗಿರಿಯಾಪುರ, ನಾರಣಾಪುರ, ಹಿರೇಕಾನವಂಗಲ, ಶಿವನಿ, ಶಿವನಿ ಆರ್.ಎಸ್ ಗ್ರಾಮದ ನಿರ್ದಿಷ್ಟ ಪ್ರದೇಶಗಳನ್ನು ಕಂಟೈನ್ಮೆಟ್‌ ವಲಯವನ್ನಾಗಿ ಘೋಷಿಸಲಾಗಿದೆ’ ಎಂದು ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.