ADVERTISEMENT

ಆಲ್ದೂರು: ಗಣಪತಿ ದೇಗುಲ ಲೋಕಾರ್ಪಣೆಗೆ ಸಿದ್ಧ

ಜೋಸೆಫ್ ಎಂ.ಆಲ್ದೂರು
Published 20 ಫೆಬ್ರುವರಿ 2025, 6:44 IST
Last Updated 20 ಫೆಬ್ರುವರಿ 2025, 6:44 IST
ಲೋಕಾರ್ಪಣೆಗೆ ಸಿದ್ಧವಾಗಿರುವ ಆಲ್ದೂರು ಶ್ರೀ ಮಹಾಗಣಪತಿ ದೇವಸ್ಥಾನ
ಲೋಕಾರ್ಪಣೆಗೆ ಸಿದ್ಧವಾಗಿರುವ ಆಲ್ದೂರು ಶ್ರೀ ಮಹಾಗಣಪತಿ ದೇವಸ್ಥಾನ   

ಆಲ್ದೂರು: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಶ್ರೀಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಫೆ. 21ರಿಂದ 25ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

ಸಾಧಾರಣವಾಗಿ ಎಡಮುರಿ ಗಣಪತಿ ದೇವಸ್ಥಾನಗಳು ಹೆಚ್ಚಾಗಿ ಕಾಣಲು ಸಿಗುತ್ತದೆ. ಬಲಮುರಿ ಗಣೇಶ ದೇವಸ್ಥಾನಗಳು ವಿರಳ. ಅಂತಹ ಬಲಮುರಿ ಗಣಪತಿ ದೇವಸ್ಥಾನ ಆಲ್ದೂರಿನಲ್ಲಿ ನಿರ್ಮಾಣವಾಗುತ್ತಿದೆ. ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಲ್ದೂರಿನ ಭಕ್ತರು ಕಾತರರಾಗಿದ್ದಾರೆ.

ದೇವಸ್ಥಾನದ ಲೋಕಾರ್ಪಣೆ ಪೂರ್ವ ಸಿದ್ಧತೆಯಾಗಿ ಶುಕ್ರವಾರ ಮತ್ತು ಶನಿವಾರ ಶ್ರೀಧರ ಭಟ್ ಕೌರಿಕೊಪ್ಪ ಮತ್ತು ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಪೂಜೆಗಳು ನಡೆಯಲಿವೆ.

ADVERTISEMENT

ಫೆ. 23ರಂದು ಬೆಳಿಗ್ಗೆ 7.32ಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಭೀಮೇಶ್ವರ ಜೋಶಿ ನೇತೃತ್ವದಲ್ಲಿ ಮಹಾಗಣಪತಿ ಆವಾಹನೆ ಮತ್ತು ಕಳಶಾರೋಹಣ ನಡೆಯಲಿದೆ. ಶೃಂಗೇರಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮಾಚಗೊಂಡನಹಳ್ಳಿ ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಸೋಮವಾರ ಬೆಳಿಗ್ಗೆ 7ಗಂಟೆಗೆ ಪಂಚಾಮೃತ ಅಭಿಷೇಕ ಆರಂಭವಾಗಲಿದ್ದು, 9ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಆ ದಿನ ಆಲ್ದೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 25ರಂದು ಮಹಾಗಣಪತಿ ದೇವಸ್ಥಾನ ಲೋಕಾರ್ಪಣೆ ಮತ್ತು ಧಾರ್ಮಿಕ ಮಹಾಸಭಾ ಕಾರ್ಯಕ್ರಮ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ.

22ರಿಂದ 25ರವರೆಗೆ ಸಂಜೆ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಜನೆ, ವೀರಗಾಸೆ ಕುಣಿತ, ಸಂಗೀತ ಸಂಜೆ, ಯಕ್ಷಗಾನ ಪ್ರದರ್ಶನ, ನೃತ್ಯ ವೈಭವ ಕಾರ್ಯಕ್ರಮ ನಡೆಯಲಿವೆ ಎಂದು ದೇವಸ್ಥಾನ ಸಮಿತಿಯ ಮುಖಂಡರು ವಿವರಿಸಿದರು.

40 ಕಂಬಗಳ ದೇಗುಲ: ವಿಸ್ತಾರವಾದ ದೇಗುಲ ಇದಾಗಿದ್ದು, ವಿಸ್ತಾರಕ್ಕೆ ತಕ್ಕಂತೆ 40 ಕಂಬಗಳನ್ನು ನಿರ್ಮಿಸಲಾಗಿದೆ. ದ್ರಾವಿಡ ಶೈಲಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ವಿಗ್ರಹಗಳು ಕೃಷ್ಣ ಶಿಲೆಯಿಂದ ಕೆತ್ತಲ್ಪಟ್ಟಿವೆ. ಉಳಿದ ಎಲ್ಲವನ್ನು ದೊಡ್ಡಬಳ್ಳಾಪುರದಿಂದ ತರಿಸಿದ ಗ್ರಾನೆಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ.

ವಿಮಾನ ಗೋಪುರ, ಮುಖ ಮಂಟಪ, ಪ್ರದಕ್ಷಿಣ ಮಂಟಪ, ಸುತ್ತುಪೌಳಿ, ಅರ್ಧ ಮಂಟಪ, ಪ್ರದಕ್ಷಿಣ ಪಥ, ಗರ್ಭಗುಡಿ, ಕಂಬಗಳ ಮೇಲೆ ಬಳ್ಳಿ, ಸಿಂಹ, ಹಕ್ಕಿಗಳ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.

ದೇವಸ್ಥಾನದ ಗರ್ಭಗುಡಿಯ ಹೊರಮುಖದ ಛಾಯಾಚಿತ್ರ

ಮಾಸ್ತಪ್ಪ ಮುರುಡೇಶ್ವರ ಮುಖ್ಯ ಶಿಲ್ಪಿಯಾಗಿದ್ದು, ಅವರ ಸಹೋದರ ಪಾಂಡುರಂಗ, ಮಂಜುನಾಥ ನಾಯಕ್ ಸಹ ಶಿಲ್ಪಿಯಾಗಿದ್ದಾರೆ. ‘ಈವರೆಗೆ 20ರಿಂದ 25 ದೇವಸ್ಥಾನಗಳನ್ನು ನಿರ್ಮಿಸಿರುವ ಅನುಭವ ಹೊಂದಿದ್ದು, ಗೋವಾದಲ್ಲಿಯೂ ಒಂದು ದೇವಸ್ಥಾನವನ್ನು ನಿರ್ಮಿಸಿದ್ದೇವೆ’ ಎಂದು ಮಾಸ್ತಪ್ಪ ಹೇಳಿದರು.

ಬಲಮುರಿ ವಿಶೇಷ ದೇಗುಲ ಇದಾಗಿದ್ದು, ಇಂತಹ ಆಲಯಗಳಲ್ಲಿ ಹರಕೆ ಕೈಗೊಂಡರೆ ಇಷ್ಟಾರ್ಥಸಿದ್ಧಿ ಪ್ರಧಾನವಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ತಿಳಿಸಿದರು.

ದೇವಸ್ಥಾನದ ಕಂಬದಲ್ಲಿ ಕೆತ್ತಲ್ಪಟ್ಟಿರುವ ಸಿಂಹದ ಉಬ್ಬು ಶಿಲ್ಪ
ದೇವಸ್ಥಾನದ ಹೊರಮಂಟಪದಲ್ಲಿ ನಿರ್ಮಿತವಾಗಿರುವ ಕಂಬಗಳ ಸಾಲು
ಲೋಕಾರ್ಪಣೆಗೆ ಸಿದ್ಧವಾಗಿರುವ ಆಲ್ದೂರು ಶ್ರೀ ಮಹಾಗಣಪತಿ ದೇವಸ್ಥಾನ

ದೇಗುಲದ ನಿರ್ಮಾಣದ ಹಿನ್ನೆಲೆ

ಆಲ್ದೂರಿನಲ್ಲಿ ಕಲ್ಲಿನ ಕಟ್ಟೆಯ ಮೇಲೆ ಪುಟ್ಟ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಆಗ ಶಾಸಕರಾಗಿದ್ದ ಸಿ.ಎ. ಚಂದ್ರೇಗೌಡ ಅವರು ಗಣಪತಿ ದೇವಾಲಯ ನಿರ್ಮಿಸಲು ಸಂಕಲ್ಪ ಮಾಡಿದರು. ಗಿರಿಜಾ ಶಂಕರ್ ಕಲ್ಲೇಗೌಡ ಸಿ.ಎ. ಕೃಷ್ಣೆಗೌಡ ಬೈರೇಗೌಡ ಮತ್ತು ಅಂದಿನ ಭಕ್ತರನ್ನು ಸೇರಿಸಿ ಸಮಿತಿಯೊಂದು ರಚನೆಯಾಯಿತು.

ದೇಣಿಗೆ ಮೂಲಕ ₹2.50 ಲಕ್ಷ ಸಂಗ್ರಹ ಮಾಡಿ 1977ರಲ್ಲಿ ಮಹಾಗಣಪತಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆ ಅವರು ದೇವಸ್ಥಾನ ಉದ್ಘಾಟಿಸಿದ್ದರು. ಅದಾಗಿ 43 ವರ್ಷಗಳು ಕಳೆದಿದ್ದು ದೇವಸ್ಥಾನ ಶಿಥಿಲಾವಸ್ತೆ ತಲುಪಿತ್ತು. ಅದನ್ನು ಮನಗಂಡು ನೂತನ ದೇಗುಲು ನಿರ್ಮಿಸಲು ತೀರ್ಮಾನಿಸಿ 2020ರಿಂದ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಲಾಯಿತು. 4 ವರ್ಷಗಳ ಕಾಲ ಕಾಮಗಾರಿ ನಡೆದಿದ್ದು ಪ್ರಸ್ತುತ ಲೋಕಾರ್ಪಣೆಗೆ ಸಿದ್ಧವಾಗಿದೆ. 

₹3 ಕೋಟಿ ಖರ್ಚು ಅಂದಾಜಿಸಲಾಗಿತ್ತು. ಸಿ.ಟಿ. ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ₹1 ಕೋಟಿ ಅನುದಾನ ಕೊಡಿಸಿದ್ದರು. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ₹5 ಲಕ್ಷ ಎಂ.ಕೆ. ಪ್ರಾಣೇಶ್ ₹4 ಲಕ್ಷ ಮಹಾಗಣಪತಿ ಸೇವಾ ಸಮಿತಿ ದೇಣಿಗೆ ಸಂಗ್ರಹ ಮಾಡಿದ್ದು ಈಗಾಗಲೇ ₹3 ಕೋಟಿ ಖರ್ಚಾಗಿದೆ. ಅರ್ಚಕರ ನಿವಾಸ ಸಮುದಾಯ ಭವನ ನಿರ್ಮಾಣ ಬಾಕಿ ಇದ್ದು ಎಲ್ಲವೂ ಪೂರ್ಣಗೊಳ್ಳವ ವೇಳೆಗೆ ವೆಚ್ಚ ₹4 ಕೋಟಿ ತಲುಪಲಿದೆ ಎಂದು ಸೇವ ಸಮಿತಿ ಸದಸ್ಯರು ಹೇಳುತ್ತಾರೆ.

ದೇವಸ್ಥಾನ ನಿರ್ಮಾಣಕ್ಕೆ ಸಿ.ಎ. ಚಂದ್ರೇಗೌಡ ಸಿ. ಸುರೇಶಗೌಡ ಕುಟುಂಬ 20 ಗುಂಟೆ ಜಮೀನು ದಾನವಾಗಿ ಒದಗಿಸಿದೆ. ಆಲ್ದೂರಿನಿಂದ ಬೇರೆಡೆಗೆ ವಿವಾಹವಾಗಿ ತೆರಳಿರುವ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ ಎಂದು ದೇವಸ್ಥಾನದ ಪದಾಧಿಕಾರಿ ರವಿಕುಮಾರ್ ಎಚ್.ಎಲ್. ನೆನಪಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.