ADVERTISEMENT

ಗಣೇಶ ಉತ್ಸವದಿಂದ ಬಾಂಧವ್ಯ ಬೆಸುಗೆ: ಡಿ.ಕೆ.ಲಕ್ಷ್ಮಣಗೌಡ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:15 IST
Last Updated 31 ಆಗಸ್ಟ್ 2025, 5:15 IST
ಮೂಡಿಗೆರೆ ತಾಲ್ಲೂಕಿನ ಹಳೇಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
ಮೂಡಿಗೆರೆ ತಾಲ್ಲೂಕಿನ ಹಳೇಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು   

ಮೂಡಿಗೆರೆ: ಗಣಪತಿ ಉತ್ಸವವು ಜನರ ಬಾಂಧವ್ಯವನ್ನು ಬೆಸೆಯುತ್ತದೆ ಎಂದು ಕನ್ನಡ‌ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಹೇಳಿದರು.

ತಾಲ್ಲೂಕಿನ ಹಳೇಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಕಸಾಪ ಬಣಕಲ್ ಹೋಬಳಿ ಘಟಕದ ವತಿಯಿಂದ ಏರ್ಪಡಿಸಿದ್ದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಣಪತಿ ಉತ್ಸವವು ಜನರನ್ನು ಒಗ್ಗಟ್ಟಿನಲ್ಲಿ ಬೆಸೆಯುವುದರಿಂದ ಜಲ, ನೆಲದ ವಿಚಾರಗಳಿಗೂ ಉತ್ಸವಗಳು ಬುನಾದಿ ಹಾಕುತ್ತವೆ.‌ ಗಣಪತಿ ಉತ್ಸವಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದರೆ ಪ್ರತಿಭೆಗಳನ್ನು ಹೊರ ತೆಗೆಯಲು ನೆರವಾಗುತ್ತದೆ’ ಎಂದರು.

ADVERTISEMENT

ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಕೆ.ಮಂಜುನಾಥ್ ಮಾತನಾಡಿ, ‘ಹಳ್ಳಿಗಳು ಜಾನಪದ ಕ್ಷೇತ್ರಗಳ ಬೇರುಗಳಾಗಿವೆ. ಕೋಲಾಟ, ಗದ್ದೆ ನಾಟಿ ಪದ, ರಾಗಿ ಬೀಸುವ ಲಾವಣಿಗಳು, ಒಕ್ಕಲಾಟದ ಹಾಡುಗಳು, ಮದುವೆ ಶಾಸ್ತ್ರದ ಹಾಡುಗಳು ಮುಂತಾದ ಜಾನಪದ ಗೀತೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಗಣಪತಿ ಉತ್ಸವದಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ಮರು ಜೀವ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಗಾಯಕರನ್ನು ಸನ್ಮಾನಿಸಲಾಯಿತು. ಕಸಾಪ ಬಣಕಲ್ ಹೋಬಳಿ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಚ್ಚಿನ್, ಕನ್ನಡ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ರವಿ ಹಂತೂರು, ಗಾಯಕರಾದ ರವೀಂದ್ರ ಬಕ್ಕಿ, ವೆಂಕಟೇಶ ಕೆಸವಳಲು, ಕಣಚೂರು ಆನಂದ, ಶ್ರೀಜಿತ್, ರಾಮಚಂದ್ರ, ರಂಜಿತ್, ರಘು, ಗಣಪತಿಗೌಡ, ಜೈಕರ್ ಗೌಡ, ರವಿಗೌಡ, ರಾಮಕೃಷ್ಣ ಗೌಡ, ಸಂಗಮ, ಪ್ರಜ್ವಲ್, ವೇದ ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.