ADVERTISEMENT

ಚಿಕ್ಕಮಗಳೂರು | ಗೌರಿ–ಗಣೇಶ ಹಬ್ಬ: ವ್ಯಾಪಾರ ಜೋರು

ಬೆಲೆ ಏರಿಕೆ ನಡುವೆ ಖರೀದಿಯಲ್ಲಿ ತೊಡಗಿರುವ ಜನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:32 IST
Last Updated 26 ಆಗಸ್ಟ್ 2025, 4:32 IST
ಚಿಕ್ಕಮಗಳೂರಿನಲ್ಲಿ ಪೂಜಾ ಸಾಮಾಗ್ರಿ ಖರೀದಿಯಲ್ಲಿ ನಿರತವಾಗಿರುವ ಜನ
ಚಿಕ್ಕಮಗಳೂರಿನಲ್ಲಿ ಪೂಜಾ ಸಾಮಾಗ್ರಿ ಖರೀದಿಯಲ್ಲಿ ನಿರತವಾಗಿರುವ ಜನ   

ಚಿಕ್ಕಮಗಳೂರು: ಗೌರಿ– ಗಣೇಶ ಹಬ್ಬದ ಸಂಭ್ರಮಾಚರಣೆಗೆ ಜಿಲ್ಲೆಯ ಜನ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ಬೆಲೆ ಏರಿಕೆ ನಡುವೆ ಖರೀದಿಗೆ ಜನ ಮುಗಿಬಿದ್ದಿದ್ದರು.

ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ನಗರದೆಲ್ಲೆಡೆ ಖರೀದಿಯ ಭರಾಟೆ ಜೋರಾಗಿಯೇ ಇತ್ತು. ಮಾರುಕಟ್ಟೆ ರಸ್ತೆ, ದೀಪಾ ನರ್ಸಿಂಗ್‌ ಹೋಂ ರಸ್ತೆ, ಎಂ.ಜಿ. ರಸ್ತೆ, ತೆಗರಿಹಂಕಲ್‌ ವೃತ್ತ, ಎಐಟಿ ವೃತ್ತ ಸೇರಿದಂತೆ ನಗರ ವಿವಿಧೆಡೆ ಜನ ಖರೀದಿಯಲ್ಲಿ ನಿರತರಾಗಿದ್ದರು.

ಗೌರಿ-ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿತ್ತು, ನಗರ ಸೇರಿದಂತೆ ಬಡಾವಣೆ, ಹಳ್ಳಿಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆಗಾಗಿ ಯುವಕರು ಗಣೇಶಮೂರ್ತಿ ಚೌಕಾಸಿ ಮಾಡಿ ಖರೀದಿಯಲ್ಲಿ ಮುಗಿಬಿದ್ದರು. ಒಂದು ಗೌರಿ ಮೂರ್ತಿಗೆ ₹100 ನಿಂದ ಆರಂಭವಾಗಿ ₹600 ತನಕ ಮಾರಾಟ ನಡೆಯಿತು. 

ADVERTISEMENT

ಗೌರಿ ಹಬ್ಬಕ್ಕೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವ ಸಂಪ್ರದಾಯ ಇರುವುದರಿಂದ ವಿಜಯಪುರ ರಸ್ತೆ, ಎಂ.ಜಿ.ರಸ್ತೆ, ಕೆ.ಎಂ.ರಸ್ತೆಗಳ ಬಳೆ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಳೆಗಳ ಖರೀದಿಯಲ್ಲಿ ಮಹಿಳೆಯರು ನಿರತರಾಗಿದ್ದರು. ಜೊತೆಗೆ ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ ಎಂದು ಕರೆಸಿಕೊಂಡಿದ್ದು ನಗರದ ಸೀರೆ ಅಂಗಡಿಗಳಲ್ಲಿ ಮಹಿಳೆಯರು ಸೀರೆ ತುಂಬಿದ್ದರು.

ನಗರಲ್ಲಿರುವ ದೊಡ್ಡ ವ್ಯಾಪಾರ ಮಳಿಗೆಗಳು, ಬಟ್ಟೆ ಅಂಗಡಿಗಳಲ್ಲಿ ಗಣೇಶ ಹಬ್ಬದ ರಿಯಾಯಿತಿ ನೀಡಲಾಗಿದ್ದು, ಬಟ್ಟೆ, ದಿನಸಿ, ದಿನ ಬಳಕೆ ವಸ್ತುಗಳು, ಗೃಹಲಂಕಾರ ವಸ್ತುಗಳನ್ನು ಖರೀದಿಸಲು ಜನ ಮುಗಿ ಬಿದ್ದಿದ್ದರು.

ಜೊತೆಗೆ ಗುರುನಾಥ ಚಿತ್ರಮಂದಿರ ರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೇಕಾದ ಅಲಂಕಾರಿ ವಸ್ತುಗಳು, ವಿದ್ಯುತ್ ದೀಪಗಳು, ಬಂಟಿಂಗ್ಸ್‌ಗಳು ಪೂಜೆಗೆ ಬೇಕಾದ ಕುಂಕುಮ, ಬಾಗಿನ ನೀಡಲು ಬಿದಿರಿನ ಮೊರ, ಬಾಗಿನ ಸಾಮಾಗ್ರಿಗಳ ಖರೀದಿಯಲ್ಲಿ ಜನರು ತುಂಬಿ ತುಳುಕಿದರು.

ಆಜಾದ್ ಪಾರ್ಕ್‌ ಬಳಿ ಹೂವಿನ ವ್ಯಾಪಾರ ನಡೆಯುತ್ತಿರುವುದು
ಗೌರಿ ಹಬ್ಬದ ಪ್ರಯುಕ್ತ ಬಣ್ಣ ಬಣ್ಣದ ಬಳೆ ಖರೀದಿಸಿದ ಮಹಿಳೆಯರು

ಹೂವು ಹಣ್ಣು ತರಕಾರಿ ದುಬಾರಿ

ಹೂವು ಹಣ್ಣು ತರಕಾರಿಗಳ ದರ ಮತ್ತಷ್ಟು ಹೆಚ್ಚಾಗಿದ್ದು ಚಂಡು ಹೂವು ಒಂದು ಮಾರಿಗೆ ₹100 ರೂಪಾಯಿ ಸೇವಂತಿಗೆ ₹150 ಮಲ್ಲಿಗೆ ₹200 ರೂಪಾಯಿ ಕನಕಾಂಬರ ಗುಲಾಬಿ ಸುಗಂಧ ರಾಜ ಸೇರಿದಂತೆ ವಿವಿಧ ಬಿಡಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಜೊತೆಗೆ ಗೌರಿ ಗಣೇಶ ಮೂರ್ತಿ ಅಲಾಂಕಾರ ಬೇಕಾದ ಮಾವಿನ ಎಲೆ ಬಾಳೆಗಿಡ ಬಾಳೆ ಎಲೆ ಮಾರಾಟ ನಡೆಯಿತು.  ಹಣ್ಣುಗಳ ದರ ಕೂಡ ದುಬಾರಿಯಾಗಿತ್ತು. ದ್ರಾಕ್ಷಿ ಕೆಜಿಗೆ  ₹200 ಮೂಸಿಂಬೆ ₹100 ಸೇಬು ₹140  ದಾಳಿಂಬೆ ₹150 ಬಾಳೆ ಹಣ್ಣು ₹140 ಇತ್ತು. ತರಕಾರಿ ಬೆಲೆ ಕೂಡ ಕೊಂಚ ಹೆಚ್ಚಳವಾಗಿತ್ತು. ಬೀನ್ಸ್‌ ಕೆ.ಜಿಗೆ ₹80 ಆಲೂಗೆಡ್ಡೆ ₹60 ಈರುಳ್ಳಿ ₹30 ಸೌತೆಕಾಯಿ ₹20 ನುಗ್ಗೆಕಾಯಿ ₹80 ಟೊಮೊಟೊ ₹60 ಕ್ಯಾರೆಟ್‌ ₹80 ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.