ಕೊಪ್ಪ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ವರ್ಷದಲ್ಲಿ ಒಂದೇ ಸ್ಥಳದಲ್ಲಿ ಎರಡು ಸಾವು ಸಂಭವಿಸಿದೆ. ಈ ಹಿಂದೆ ಬಾಲಕಿ ಮೃತಪಟ್ಟಾಗ ಸರ್ಕಾರ, ಆಡಳಿತ ವರ್ಗ ಎಚ್ಚೆತ್ತುಕೊಂಡಿಲ್ಲ. ನಿರ್ಲಕ್ಷ್ಯ ವಹಿಸಿದ ಪರಿಣಾಮ ಇನ್ನೊಂದು ಸಾವಾಗಿದೆ. ಈ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ವಸತಿ ಶಾಲೆ ಅವ್ಯವಸ್ಥೆಗಳಿಂದ ಕೂಡಿದೆ. ಶೌಚಗೃಹ, ಕೊಠಡಿಗಳು ಸರಿಯಿಲ್ಲ, ವಾರ್ಡನ್ ಇಲ್ಲ. ಶಾಲೆಯ ಸುತ್ತಮುತ್ತ ಸಿಸಿ ಟಿ.ವಿ ಕ್ಯಾಮೆರಾಗಳಿಲ್ಲ. ವಿದ್ಯಾರ್ಥಿಗಳ ಸುರಕ್ಷತೆಗೆ ಇರಬೇಕಾದ ಯಾವುದೇ ಕ್ರಮಗಳು ಇಲ್ಲ. ಬಾಲಕಿ ಸಾವು ಆತ್ಮಹತ್ಯೆಯೋ.? ಕೊಲೆಯೋ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ ಎಂದರು.
ಶಾಸಕ ರಾಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ವಸತಿ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿಲ್ಲ. ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದದಿಂದ ₹15 ಲಕ್ಷ ಪರಿಹಾರ ನೀಡಬೇಕು. ವಸತಿ ಶಾಲೆಯ ಆಡಳಿತ ಮಂಡಳಿ ಜತೆಗೆ ಸ್ಥಳೀಯ ಸಂಸ್ಥೆಗಳನ್ನು ಸೇರಿಸಿಕೊಂಡು ಮಾನಿಟರಿಂಗ್ ಸೆಲ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಕ್ಷೇತ್ರ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕಣಿವೆ, ಮುಖಂಡ ಕುಂಚೂರು ವಾಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.