ಚಿಕ್ಕಮಗಳೂರು: ಕಾಫಿಗೆ ಹಿಂದೆಂದೂ ಕಾಣದ ಬೆಲೆ ಬಂದಿದೆ. ಅದರಲ್ಲೂ ಅರೇಬಿಕಾ ಕಾಫಿ ದರ ಕೆ.ಜಿಗೆ ₹600 ಗಡಿ ದಾಟಿದೆ. ಆದರೆ, ಜಿಲ್ಲೆಯಲ್ಲಿ ಅರೇಬಿಕಾ ಬೆಳೆಯೇ ಕಡಿಮೆಯಾಗಿದ್ದು, ಇರುವ ಬೆಳೆಯಲ್ಲೂ ಫಸಲು ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಬಾಬಾ ಬುಡನ್‌ಗಿರಿಯನ್ನು ಭಾರತದ ಕಾಫಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಗಿರಿಗಳ ಸಾಲು, ದಟ್ಟವಾದ ಕಾಡು, ವನ್ಯಜೀವಿಗಳ ಆವಾಸ ಸ್ಥಾನದಲ್ಲಿ ಬೆಳೆಯುವ ಕಾಫಿಗೆ ಅನನ್ಯವಾದ ರುಚಿ ಇದೆ. ಈ ಪ್ರದೇಶದಲ್ಲಿ ಮೊದಲಿಗೆ ಕಾಫಿ ಬೆಳೆ ಆರಂಭವಾಗಿದ್ದೆ ಅರೇಬಿಕಾ ತಳಿಯ ಮೂಲಕ.
ಕಾಲ ಕ್ರಮೇಣ ಈ ತಳಿ ಜಿಲ್ಲೆಯಲ್ಲಿ ಶೇ 70ರಷ್ಟು ಆವರಿಸಿತ್ತು. ಬಳಿಕ ಬಂದ ರೊಬಸ್ಟಾ ತಳಿ ಶೇ 30ರಷ್ಟು ಇತ್ತು. ಕಳೆದ 15ರಿಂದ 20 ವರ್ಷಗಳಲ್ಲಿ ಅರೇಬಿಕಾ ಕಾಫಿ ತೋಟಗಳ ಪ್ರದೇಶ ಕಡಿಮೆಯಾಗುತ್ತಲೇ ಇದೆ. ಈಗ ಶೇ 30ಕ್ಕಿಂತ ಕಡಿಮೆ ಪ್ರದೇಶದಲ್ಲಿ ಅರೇಬಿಕಾ ಬೆಳೆ ಇದೆ.
ರೊಬಸ್ಟಾ ಕಾಫಿ ಗಿಡಗಳಿಗೆ ಹೋಲಿಸಿದರೆ ಅರೇಬಿಕಾ ಕಾಫಿ ಗಿಡಗಳು ಸೂಕ್ಷ್ಮ. ಆಗಾಗ ತಗಲುವ ರೋಗ, ಹವಾಮಾನ ವೈಪರಿತ್ಯದಿಂದ ಅರೇಬಿಕಾ ಕಾಫಿ ತೋಟಗಳ ನಿರ್ವಹಣೆ ದುಬಾರಿ. ಈ ವರ್ಷದ ಮಾದರಿಯಲ್ಲೇ ಬೆಲೆ ಬಂದರೆ ನಿರ್ವಹಣೆ ಮಾಡಬಹುದು, ಕಳೆದ ವರ್ಷಗಳಲ್ಲಿ ಇದ್ದ ಬೆಲೆಯಲ್ಲಿ ಅರೇಬಿಕಾ ತೋಟ ನಿರ್ವಹಣೆ ಕಷ್ಟ. ಹಾಗಾಗಿಯೇ ಅರೇಬಿಕಾ ತೋಟಗಳು ನಿರ್ವಹಣೆ ಇಲ್ಲವಾಗಿವೆ ಎನ್ನುತ್ತಾರೆ ಬೆಳೆಗಾರರು.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು, ಬಾಬಾಬುಡನ್‌ಗಿರಿಯ ತಪ್ಪಲು, ತರೀಕೆರೆ ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕಾ ಕಾಫಿಯನ್ನೇ ಇಂದಿಗೂ ಬೆಳೆಗಾರರು ಹೊಂದಿದ್ದಾರೆ. ಆದರೆ, ಈ ತೋಟಗಳಲ್ಲಿ ಫಸಲು ಇಲ್ಲವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 65ರಷ್ಟು ಫಸಲ ಕಡಿಮೆಯಾಗಿದೆ. 100 ಚೀಲ ಕಾಫಿ ಹಣ್ಣು ಕೊಯ್ಲು ಮಾಡುತ್ತಿದ್ದ ಬೆಳೆಗಾರರು 35 ಚೀಲ ಕೊಯ್ಲು ಮಾಡಿದರೆ ಹೆಚ್ಚು ಎಂಬಂತಾಗಿದೆ. 50 ಕೆ.ಜಿ. ಚೀಲಕ್ಕೆ ₹29,400 ದರ ಇದ್ದರೂ ಅದರ ಲಾಭ ಪಡೆದುಕೊಳ್ಳಲು ಬೆಳೆಗಾರರಿಗೆ ಇಲ್ಲವಾಗಿದೆ. ವಿಪರೀತ ಮಳೆ ಕೂಡ ಫಸಲನ್ನು ಕಡಿಮೆ ಮಾಡಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.
‘15 ವರ್ಷಗಳ ಹಿಂದೆ ಶೇ 70ರಷ್ಟು ಇದ್ದ ಅರೇಬಿಕಾ ಕಾಫಿ ಈಗ ಶೇ 30ಕ್ಕೆ ಇಳಿಕೆಯಾಗಿದೆ. ಅದರಲ್ಲೂ ಹವಮಾನ ವೈಪರಿತ್ಯದಿಂದ ಈ ವರ್ಷ ಫಸಲು ಕಡಿಮೆಯಾಗಿದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಶೇ 35ರಷ್ಟು ಮಾತ್ರ ಫಸಲು
ಕಾಫಿಗೆ ಸಾರ್ವಕಾಲಿಕ ಬೆಲೆ ಬಂದಿದೆ. ಆದರೆ ಅರೇಬಿಕಾ ಕಾಫಿ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 35ರಷ್ಟು ಮಾತ್ರ ಇದೆ ಎಂದು ಕಾಫಿ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೊಲದಗದ್ದೆ ಹೇಳಿದರು. ಬೆಳೆಗಾರರು ನಿರೀಕ್ಷೆ ಮಾಡದಷ್ಟು ಬೆಲೆ ಬಂದಿದೆ. ವಿಪರೀತ ಮಳೆ ಕೊಳೆರೋಗ ಕರಗಿ ಹೋದ ಕಾಫಿ ಬಿರುಗಳಿಗೆ ಉದುರಿ ಹೋದ ಹಣ್ಣು.. ಹೀಗೆ ಹಲವು ಕಾರಣಗಳಿಂದ ಇಳುವರಿ ಕಡಿಮೆಯಾಗಿದೆ ಎಂದರು. ಹೊಸದಾಗಿ ಕಚ್ಚುತ್ತಿರುವ ಮೊಗ್ಗು ಗಮನಿಸಿದರೆ ಮುಂದಿನ ವರ್ಷ ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಮಾರ್ಚ್ 31ರಂದು ಆರಂಭವಾಗುವ ರೇವತಿ ಮಳೆ ಸುರಿದರೆ ಉತ್ತಮ ಇಳುವರಿ ಬರಲಿದೆ ಎಂದು ತಿಳಿಸಿದರು.
ಕಾಫಿ ಧಾರಣೆ ( 50 ಕೆ.ಜಿ ತೂಕದ ಚೀಲಕ್ಕೆ ₹ಗಳಲ್ಲಿ)
ಅರೇಬಿಕಾ ಪಾರ್ಚುಮೆಂಟ್; 29400
ಅರೇಬಿಕಾ ಚೆರಿ; 15400
ರೊಬಸ್ಟಾಪಾರ್ಚುಮೆಂಟ್; 24000
ರೊಬಸ್ಟಾ ಚೆರಿ; 13015
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.