ADVERTISEMENT

ಶೃಂಗೇರಿ | ‘ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರ’

ಬೇಗಾರ್ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:16 IST
Last Updated 19 ಅಕ್ಟೋಬರ್ 2025, 6:16 IST
ಶೃಂಗೇರಿ ತಾಲ್ಲೂಕಿನ ಬೇಗಾರ್ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಕಚೇರಿಯ ಕಟ್ಟಡವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು
ಶೃಂಗೇರಿ ತಾಲ್ಲೂಕಿನ ಬೇಗಾರ್ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಕಚೇರಿಯ ಕಟ್ಟಡವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು   

ಶೃಂಗೇರಿ: ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳು ಸ್ಥಳೀಯ ಆಡಳಿತದ ಸರ್ಕಾರವಾಗಿದೆ. 73ನೇ ಸಂವಿಧಾನ ತಿದ್ದುಪಡಿಯ ಮೂಲಕ ಇವುಗಳಿಗೆ ಸಾಂವಿಧಾನಿಕ ಮಾನ್ಯತೆ ದೊರಕಿದೆ. ಗ್ರಾಮೀಣ ಪ್ರದೇಶದ ಸ್ವ-ಸರ್ಕಾರದ ಮೂಲ ಘಟಕಗಳಾಗಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

 ತಾಲ್ಲೂಕಿನ ಬೇಗಾರ್ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಂಚಾಯಿತಿಯಲ್ಲಿ ಗ್ರಾಮ ಸಭೆಗಳು ಮತ್ತು ವಾರ್ಡ್ ಸಭೆಗಳು ಗ್ರಾಮದ ಪ್ರತಿಯೊಬ್ಬ ಮತದಾರರಿಗೂ ತಮ್ಮ ಸಮಸ್ಯೆಗಳನ್ನು ಚರ್ಚಿಸಲು, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಲು ವೇದಿಕೆಯನ್ನು ಒದಗಿಸುತ್ತವೆ. ಇದು ಪ್ರಜಾಪ್ರಭುತ್ವದ ಮೂಲಭೂತ ಆಶಯ. ಪಂಚಾಯಿತಿಗಳು ಕುಡಿಯುವ ನೀರು, ನೈರ್ಮಲ್ಯ, ರಸ್ತೆ ನಿರ್ವಹಣೆ, ಬೀದಿ ದೀಪಗಳು, ಶಿಕ್ಷಣ, ಆರೋಗ್ಯ ಮತ್ತು ಫಲಾನುಭವಿಗಳ ಆಯ್ಕೆಯಂತಹ ಮೂಲ ಸೌಕರ್ಯ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಹತ್ತಿರದ ಸರ್ಕಾರ’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇ.ಓ ಸುಧೀಪ್ ಮಾತನಾಡಿ, ‘ಜನರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಅವರ ಅಗತ್ಯಕ್ಕೆ ತಕ್ಕಂತೆ ಯೋಜನೆಗಳು ಜಾರಿಯಾಗುತ್ತವೆ. ಗ್ರಾಮ ಪಂಚಾಯಿತಿಯು ಬಜೆಟ್, ಲೆಕ್ಕಪರಿಶೋಧನೆ ಮತ್ತು ಯೋಜನೆಗಳ ಅನುಷ್ಠಾನವನ್ನು ಗ್ರಾಮ ಸಭೆಯ ಮುಂದೆ ಇಡಬೇಕಾಗುತ್ತದೆ. ಇದರಿಂದ ಪಂಚಾಯಿತಿಯ ಕಾರ್ಯ ವೈಖರಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಜನರಿಗೆ ಅವಕಾಶ ಸಿಗುತ್ತದೆ’ ಎಂದರು.

ಬೇಗಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಣ್ಕುಳಿ ಲಕ್ಷ್ಮೀಶ ಮಾತನಾಡಿ, ‘ಗ್ರಾಮೀಣ ಮಟ್ಟದಲ್ಲಿ ಅಧಿಕಾರವನ್ನು ಕೇಂದ್ರೀಕೃತ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಪಂಚಾಯಿತಿ ಸಾಕಾರಗೊಳಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವುದೇ ಗ್ರಾಮ ಪಂಚಾಯಿತಿ. ಶಾಸಕ ಟಿ.ಡಿ ರಾಜೇಗೌಡರು ನಮ್ಮ ಪಂಚಾಯಿತಿ ವ್ಯಾಪ್ತಿ ಅಭಿವೃದ್ಧಿಗೆ ಸುಮಾರು 10 ಕೋಟಿಗೂ ಹೆಚ್ಚು ಅನುದಾನ ನೀಡಿದ್ದಾರೆ' ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನುಪ್ ಸಂಜೋಗ್, ಎಂಜಿನಿಯರ್ ವಿನೋದ್, ಭುವನೇಂದ್ರ, ಸಬ್ ಇನ್‍ಸ್ಪೆಕ್ಟರ್ ಅಭಿಷೇಕ್, ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರಿಟಿ, ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ ಟಿ.ಎಚ್, ಸದಸ್ಯರಾದ ಕೇಶವ ಹರಾವರಿ, ಗಿರೀಶ್, ಪ್ರಕಾಶ್, ಶ್ರೀಲತಾ, ಸುಮಿತ್ರ, ಶೈಲಾ ಇತರರು ಹಾಜರಿದ್ದರು.

ಗ್ರಾಮ ಪಂಚಾಯಿತಿಗಳು ಗ್ರಾಮೀಣ ಭಾರತದ ಆಡಳಿತ ಮತ್ತು ಅಭಿವೃದ್ಧಿಗೆ ಬೆನ್ನೆಲುಬಾಗಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಮತ್ತು ಹಕ್ಕು.

- ಟಿ.ಡಿ.ರಾಜೇಗೌಡ ಶಾಸಕ

‘ಆರೋಪ ಸಾಬೀತು ಪಡಿಸಿದರೆ ರಾಜಕಾರಣದಿಂದ ನಿವೃತ್ತಿ’

‘ನಾನು ಹುಟ್ಟುವಾಗಲೇ ಶ್ರೀಮಂತ. ಆದರೆ ಅಕ್ರಮ ಆಸ್ತಿ ಗಳಿಸಿದ್ದೇನೆ ಎಂದು ರಾಜಕಾರಣದ ದ್ವೇಷದಿಂದ ನನ್ನ ಮೇಲೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಪಟಾಲಂ ದೂರು ದಾಖಲಿಸಿದೆ. ಆರೋಪ ಸಾಬೀತು ಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ’ ಎಂದು ಶಾಸಕ ಟಿ.ಡಿ ರಾಜೇಗೌಡ ಸವಾಲು ಹಾಕಿದರು. ‘ನ್ಯಾಯಾಲಯದ ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ. ನನಗೆ ಯಾವುದೇ ರೀತಿಯ ಭಯವಿಲ್ಲ. ತನಿಖೆಯಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.