
ಚಿಕ್ಕಮಗಳೂರು: ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಜಿಎಸ್‌ಟಿ ಇಳಿಕೆ ದೊಡ್ಡ ಕ್ರಾಂತಿ ಸೃಷ್ಟಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ತೆರಿಗೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ನಾಗರಿಕ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ ಭಟ್ ಹೇಳಿದರು.
ಜಿಎಸ್‌ಟಿ ಸುಧಾರಣೆ ಕುರಿತು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ‘ನವಪೀಳಿಗೆ ಜಿಎಸ್‌ಟಿ 2.0’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಸಾಮಾನ್ಯ ಜನರ ಆಕಾಂಕ್ಷೆ ನನಸುಗೊಳಿಸಲು ಕೇಂದ್ರ ಸರ್ಕಾರ ಶೇ 99ರಷ್ಟು ಸರಕು-ಸಾಗಣಿಕೆ ವೆಚ್ಚದ ತೆರಿಗೆ ಇಳಿಕೆ ಮಾಡಲಾಗಿದೆ. ಇದು ಬಹುತೇಕ ಫಲಪ್ರದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಜಿಎಸ್‌ಟಿ ಕ್ರಾಂತಿ ದೊಡ್ಡ ಅಲೆ ಸೃಷ್ಟಿಸಿ ಜನರಿಗೆ ದೀಪಾವಳಿ ಕೊಡುಗೆ ನೀಡಿದೆ ಎಂದರು.
ಕೇಂದ್ರ ಸರ್ಕಾರ ಜನರ ಒಳಿತಿಗೆ ನಾಲ್ಕು ಸ್ಪಾಬ್‌ಗಳಲ್ಲಿ ತೆರಿಗೆ ಇಳಿಕೆ ಮಾಡಿದೆ. ಜಿಎಸ್‌ಟಿ ಕಡಿತದಿಂದ 145 ಕೋಟಿ ಜನಸಂಖ್ಯೆಗೆ ಹರ್ಷ ತಂದಿದೆ. ಮೋದಿ ಅವರ ದೂರದೃಷ್ಟಿ ಆಲೋಚನೆಗಳಿಂದ ದೇಶ ಸದೃಢವಾಗುತ್ತಿದೆ. ಜನರ ಬಳಿ ಉಳಿತಾಯ ಹೆಚ್ಚಾದಾಗ ವಹಿವಾಟು ಹೆಚ್ಚಾಗಲಿದ್ದು, ಉತ್ಪಾದನೆಯೂ ಅಧಿಕವಾಗಲಿದೆ. ತೆರಿಗೆ ಸಂಗ್ರಹ ಕೂಡ ಹೆಚ್ಚಾಗಲಿದೆ ಎಂದು ತಿಳಿಸಿದರು.
ಜನರ ಜೀವನ ಸುಧಾರಣೆಗೆ ಆರ್ಥಿಕ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರದ ನಡೆ ಮಧ್ಯಮ ವರ್ಗಕ್ಕೆ ಉಪಕಾರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ರಾಷ್ಟ್ರವನ್ನು ಕೊಂಡಾಡುವ ಬದಲು ಮೊಸರಿನಲ್ಲಿ ಕಲ್ಲು ಹುಡುಕಿ ಅಪಪ್ರಚಾರಕ್ಕೆ ಮುಂದಾಗಿದೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಅಂತರ ರಾಜ್ಯ ಗಡಿಯಲ್ಲಿ ಗೂಡ್ಸ್ ವಾಹನಗಳಿಗೆ ಜಿಎಸ್‌ಟಿ ಶೂನ್ಯಗೊಳಿಸಲಾಗಿದೆ. ಯುಪಿಎ ಸರ್ಕಾರದಲ್ಲಿ ಗಬ್ಬರ್ ಸಿಂಗ್ ಆಳ್ವಿಕೆಯಿತ್ತು. ಮೋದಿ ಸರ್ಕಾರದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಹೊರೆ ಕಡಿಮೆ ಮಾಡಲಾಗಿದೆ. ಭ್ರಷ್ಟಾಚಾರ ನಿಯಂತ್ರಿಸಿ ಜಿಎಸ್‌ಟಿ ತನ್ನದೇ ದಾಪುಗಾಲು ಇಟ್ಟಿದೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಮಾತನಾಡಿ, ‘ದೇಶದ ಜನ ಊಹಿಸಲಾರದ ಮಟ್ಟದಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿದೆ. ಇಂಥ ಜನೋಪಯೋಗಿ ವಿಚಾರಗಳನ್ನು ಜನಸಾಮಾನ್ಯರ ನಡುವೆ ಪಸರಿಸಬೇಕು. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಕೇಂದ್ರ ಜನಪರ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಬೇಕು’ ಎಂದು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಪುಷ್ಪರಾಜ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲಕುಮಾರ್, ಮುಖಂಡರುಗಳಾದ ಕೋಟೆ ರಂಗನಾಥ್, ದೀಪಕ್ ದೊಡ್ಡಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.