ADVERTISEMENT

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಆಯ್ಕೆ| ಕಳೆದ ವರ್ಷ ಕಾರ್ಯನಿರ್ವಹಿಸಿದವರಿಗೇ ಮಣೆ!

ಮಾನದಂಡ ಪಾಲಿಸಿಲ್ಲ: ಆರೋಪ

ಬಿ.ಜೆ.ಧನ್ಯಪ್ರಸಾದ್
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
   

ಚಿಕ್ಕಮಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ ವರ್ಷ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ 2019–20ನೇ ಸಾಲಿಗೂ ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ. ಇದು ಕಳೆದ ಸಾಲನ್ನು ಹೊರತುಪಡಿಸಿ ಈ ಹಿಂದೆ ಹಲವು ವರ್ಷ ಕಾರ್ಯನಿರ್ವಹಿಸಿ, ಈ ಸಲ ಅರ್ಜಿ ಸಲ್ಲಿಸಿದ್ದವರಿಗೆ ಆದೇಶ ‘ಕಂಟಕ’ವಾಗಿ ಪರಿಣಮಿಸಿದೆ.

ಕಾಲೇಜು ಶಿಕ್ಷಣ ಇಲಾಖೆ ಇದೇ 9ರಂದು ಈ ಆದೇಶ ಹೊರಡಿಸಿದೆ. 2018–19ನೇ ಸಾಲಿಗೂ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು ಪರಿತಪಿಸುವಂತಾಗಿದೆ.

ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ ಮುಂದುವರಿಕೆ ನಂತರವೂ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯ ಇದ್ದರೆ, ಪೂರ್ಣಕಾಲಿಕ ಉಪನ್ಯಾಸಕರ ವರ್ಗಾವಣೆ, ನಿಯೋಜನೆ ನಂತರವೂ ಕಾರ್ಯಭಾರ ಲಭ್ಯ ಇದ್ದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದಲ್ಲಿ ಪರಿಗಣಿಸುವಂತೆ ಸೂಚಿಸಲಾಗಿದೆ.

ADVERTISEMENT

ಜೂನ್‌ 3ರಂದು ಮೊದಲ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 35 ಅಂಕ) ಗಣನೆ, ಪಿಎಚ್‌.ಡಿ– 15 ಅಂಕ, ಎನ್‌ಇಟಿ–ಎಸ್‌ಇಟಿ –12 ಅಂಕ, ಎಂ.ಫಿಲ್‌–8 ಅಂಕ, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 10 ವರ್ಷ: 30 ಅಂಕ ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ಮಾನದಂಡದಲ್ಲಿ ಮೆರಿಟ್‌ ಪಟ್ಟಿ ಸಿದ್ಧಪಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲು ತಿಳಿಸಲಾಗಿತ್ತು.

ಜೂನ್‌ 14ರಂದು ತಿದ್ದುಪಡಿ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 25 ಅಂಕ) ಗಣನೆ, ಪಿ.ಎಚ್‌ಡಿ– 12, ಎನ್‌ಇಟಿ–ಎಸ್‌ಇಟಿ –09 ಅಂಕ, ಎಂ.ಫಿಲ್‌–6, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 16 ವರ್ಷ: 48 ಅಂಕ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ನಿಗದಿಪಡಿಸಿ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಲಾಗಿತ್ತು.

ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು.

‘ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕನಾಗಿ 11 ವರ್ಷ ಬೋಧಿಸಿದ್ದೇನೆ. ಕಳೆದ ವರ್ಷ ಕಾರ್ಯನಿರ್ವಹಿಸಿದವರನ್ನೇ ಮುಂದುವರಿಸಲು ಆದೇಶ ಮಾಡಿರುವುದು ಅರ್ಜಿ ಸಲ್ಲಿಸಿದ್ದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾನದಂಡ ಆಧರಿಸಿ ಪ್ರಕ್ರಿಯೆ ನಡೆಸಬೇಕಿತ್ತು’ ಎಂದು ಶಿವಮೊಗ್ಗದ ಬಿ. ಮಂಜನಾಯಕ್‌ ದೂರಿದರು.

‘ಯಾವ ಆಧಾರದಲ್ಲಿ ಮುಂದುವರಿಸಲಾಗಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಕಾರ್ಯನಿರ್ವಹಣೆ ಹಿರಿತನ ಪರಿಗಣಿತವಾಗಿಲ್ಲ. ಈ ಆಯ್ಕೆ ಪ್ರಕ್ರಿಯೆಯು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. 10 ವರ್ಷ ವಾಣಿಜ್ಯ ವಿಷಯದ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ಕೊಪ್ಪದ ಸಿ.ಎಚ್‌. ಪ್ರಕಾಶ್‌ ದೂಷಿಸಿದರು.

ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ದೂರವಾಣಿ ಕರೆ ಮಾಡಿದರೂ ಇಲಾಖೆ ಆಯುಕ್ತರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.