ADVERTISEMENT

ವಿವಿಧ ಇಲಾಖೆಗಳವರಿಗೆ ಧ್ವಜ ವಿತರಣೆ: ಜಿಲ್ಲಾಧಿಕಾರಿ

ಹರ್‌ ಘರ್‌ ತಿರಂಗ ಅಭಿಯಾ; 2.23 ಲಕ್ಷ ಧ್ವಜ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:14 IST
Last Updated 11 ಆಗಸ್ಟ್ 2022, 4:14 IST
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದ ‘ರಾಷ್ಟ್ರಪಿತ ನೆನಪಿನ ಅಂಗಳ’ದಲ್ಲಿ ಧ್ವಜ ವಿತರಣೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸೋಮಶೇಖರ್‌, ಕೃಷಿ ಅಧಿಕಾರಿ ತಿರುಮಲೇಶ್‌, ಜಿಲ್ಲಾಧಿಕಾರಿ ರಮೇಶ್‌, ಎಸ್ಪಿ ಉಮಾಪ್ರಶಾಂತ್‌, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಡಾ.ಸಿ.ರಮೇಶ್‌ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದ ‘ರಾಷ್ಟ್ರಪಿತ ನೆನಪಿನ ಅಂಗಳ’ದಲ್ಲಿ ಧ್ವಜ ವಿತರಣೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸೋಮಶೇಖರ್‌, ಕೃಷಿ ಅಧಿಕಾರಿ ತಿರುಮಲೇಶ್‌, ಜಿಲ್ಲಾಧಿಕಾರಿ ರಮೇಶ್‌, ಎಸ್ಪಿ ಉಮಾಪ್ರಶಾಂತ್‌, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಡಾ.ಸಿ.ರಮೇಶ್‌ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಮನೆ, ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ, ಒಟ್ಟು 2.23 ಲಕ್ಷ ಧ್ವಜಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿವಿಧ ಇಲಾಖೆಯವರಿಗೆ ಸಾಂಕೇತಿಕವಾಗಿ ಧ್ವಜ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 2.76 ಲಕ್ಷ ಕುಟುಂಬಗಳು ಇವೆ. ಹರ್‌ ಘರ್‌ ತಿರಂಗ ಅಭಿಯಾನ ನಿಟ್ಟಿನಲ್ಲಿ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿದೆ. ಸಂಘ ಸಂಸ್ಥೆಗಳು, ಮನೆಗಳಿಗೆ ಧ್ವಜ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಒಂದು ಧ್ವಜಕ್ಕೆ ₹ 22 ನಿಗದಿಪಡಿಸಲಾಗಿದೆ. ಧ್ವಜ ಸಂಹಿತೆಯನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ತರಬೇತಿಯನ್ನೂ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯ ಸರ್ಕಾರಿ ಕಟ್ಟಡಗಳಿಗೆ 56 ಸಾವಿರ, ನಗರಸಭೆಗೆ 30 ಸಾವಿರ, ನಗರ ಸ್ಥಳೀಯಸಂಸ್ಥೆಗಳಿಗೆ 35 ಸಾವಿರ ಹಾಗೂ 226 ಗ್ರಾಮ ಪಂಚಾಯಿತಿಗಳಿಗೆ 1.02 ಲಕ್ಷ ಧ್ವಜಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಹಾರಿಸಿ ಸಂಜೆ ಬಾವುಟವನ್ನು ಬಿಚ್ಚಿಡಬೇಕು. ಪ್ರತಿಯೊಂದು ಕಚೇರಿಯಲ್ಲೂ ಇದಕ್ಕಾಗಿ ಒಬ್ಬರಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ವಿವರಿಸಿದರು.

ಇದೇ 13ರಂದು ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಹರ್‌ ಘರ್‌ ತಿರಂಗ ಅಭಿಯಾನಕ್ಕೆ ‘ಸ್ವಾತಂತ್ರ್ಯ ಭಾರತಿಗೆ ಅಮೃತದ ಆರತಿ’ ಗಾಯನ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುವುದು. ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

14ರಂದು ನಗರದ ರ್ಯಾಲಿ ಏರ್ಪಡಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ಅರಿವು ಮೂಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯ 22 ಸ್ವಸಹಾಯ ಸಂಘದವರು ಧ್ವಜಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.