ADVERTISEMENT

ಹಿಂದೂ ಸಮಾಜ ಬಲಗೊಳ್ಳಲು ಜಾತಿ ಒಣ ಪ್ರತಿಷ್ಠೆ ದೂರವಿಡಿ: ಹರಿಹರಪುರ ಸ್ವಾಮೀಜಿ

ಸಮಷ್ಟಿ ಸತ್ಯನಾರಾಯಣ ಪೂಜೆ, ಸಹಪಂಕ್ತಿ ಭೋಜನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:06 IST
Last Updated 20 ಫೆಬ್ರುವರಿ 2026, 4:06 IST
ಕೊಪ್ಪ ತಾಲ್ಲೂಕು ಬೊಮ್ಮಲಾಪುರದಲ್ಲಿ ಸಮಷ್ಟಿ ಸತ್ಯನಾರಾಯಣ ಪೂಜೆಯಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಿದ್ದರು
ಕೊಪ್ಪ ತಾಲ್ಲೂಕು ಬೊಮ್ಮಲಾಪುರದಲ್ಲಿ ಸಮಷ್ಟಿ ಸತ್ಯನಾರಾಯಣ ಪೂಜೆಯಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಿದ್ದರು   

ಕೊಪ್ಪ: ‘ಹಿಂದೂ ಸಮಾಜದಲ್ಲಿ ಕಾಲ ವೈಪರೀತ್ಯ ದೋಷದಿಂದ ಬಂದಿರುವ ಎಲ್ಲಾ ಪಿಡುಗುಗಳನ್ನು ಪರಿಹಾರ ಮಾಡಿಕೊಳ್ಳಬೇಕು. ಜಾತಿ, ಒಣ ಪ್ರತಿಷ್ಠೆ ಇಟ್ಟುಕೊಂಡರೆ ಕೆಲವೇ ವರ್ಷಗಳಲ್ಲಿ ಧೂಳಿಪಟವಾಗುತ್ತದೆ’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಬೊಮ್ಮಲಾಪುರದಲ್ಲಿ ಶಿಕ್ಷಕ ಗಜೇಂದ್ರ ಸಹೋದರರ ಗುರುವಾರ ಆಯೋಜಿಸಿದ್ದ ಸಮಷ್ಟಿ ಸತ್ಯನಾರಾಯಣ ಪೂಜೆ, ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ ತಾರತಮ್ಯದ ಅನಿಷ್ಟ ಪದ್ಧತಿ ಮೂಲಕ ಭಾರತ ಮಾತೆಗೆ ಮೋಸ ಮಾಡುತ್ತಿದ್ದೇವೆ, ಧರ್ಮಕ್ಕೆ ದ್ರೋಹ ಮಾಡುತ್ತಿದ್ದೇವೆ. ಇಡೀ ಹಿಂದೂ ಸಮಾಜವನ್ನು ಏಕದೃಷ್ಟಿಯಿಂದ ಕಾಣಬೇಕು. ಜಾತಿ ಪಿಡುಗು ಅಂತ್ಯಗೊಳ್ಳಬೇಕು, ಎಲ್ಲರೂ ಹೃದಯದಿಂದ ಒಂದಾಗಬೇಕು. ಹಿಂದೂ ಸಮಾಜೋತ್ಸವ ವೇದಿಕೆಗೆ ಸೀಮಿತವಾದರೆ ಧರ್ಮ ಗಟ್ಟಿಯಾಗುವುದು ಹೇಗೆ? ನಮ್ಮ ಧರ್ಮದ ವಿರುದ್ಧ ಜಾತಿ ತಾರತಮ್ಯವೆಂಬ ದೋಷವನ್ನು ಬೆಟ್ಟು ಮಾಡಿ ತೋರಿಸುವುದಕ್ಕೆ ಉತ್ತರ ಕೊಡಬೇಕು’ ಎಂದರು.

ADVERTISEMENT

ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ, ವೇದಗಳಲ್ಲಿ ಜಾತಿ ಇರಲಿಲ್ಲ, ವರ್ಣ ಪದ್ಧತಿ ಇತ್ತು, ವೃತ್ತಿ ಆಧಾರಿತ ಜಾತಿ ಸೃಷ್ಟಿಯಾಯಿತು. ಈಗ ವಂಶ ಆಧಾರಿತ ವೃತ್ತಿ ಪದ್ಧತಿ ಇಲ್ಲ. ಸಮಾಜವನ್ನು ದೇವರ ಸ್ವರೂಪದಲ್ಲಿ ನೋಡಬೇಕು. ಸಮುದಾಯ ಇರಲಿ, ಆದರೆ ಒಂದು ಹೆಚ್ಚು ಒಂದು ಕಡಿಮೆ ಎಂಬ ತಾರತಮ್ಯ ಬೇಡ. ಹೂತೋಟದಲ್ಲಿ ಎಲ್ಲಾ ಬಗೆಯ ಹೂಗಳು ಇದ್ದರೆ ಚೆಂದ. ನಾರಾಯಣ ಆರಾಧನೆ ಎಲ್ಲಾ ಸಮುದಾಯಕ್ಕೆ ಸೇರಿದೆ ಎಂದು ತಿಳಿಸಿದರು.

ಜಾತಿ ನೋಡದೆ ಪ್ರತಿಯೊಬ್ಬರ ಭಾವನೆಗಳನ್ನು ಹಂಚಿಕೊಳ್ಳಿ, ಜಾತಿ ನೋಡದೆ ನೋವಿಗೆ ಸ್ಪಂದಿಸಿ. ಗ್ರಾಮದಲ್ಲಿ ವರ್ಷಕ್ಕೆ ನಾಲ್ಕೈದು ಮನೆಗಳಲ್ಲಿ ಇಂತಹ ಸಮಷ್ಟಿ ಸತ್ಯನಾರಾಯಣ ಪೂಜೆ ನಡೆಯಬೇಕು. ಎಲ್ಲಾ ಸಮುದಾಯವನ್ನು ಆಹ್ವಾನಿಸಬೇಕು. ಸಹಪಂಕ್ತಿ ಭೋಜನ ನಡೆಯಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಿಂದೂ ಧರ್ಮ ಪ್ರಕೃತಿಯನ್ನು ಆರಾಧಿಸುತ್ತದೆ. ಪ್ರಕೃತಿಗೆ ಇಲ್ಲದ ತಾರತಮ್ಯ ಮನುಷ್ಯರಲ್ಲೇಕೆ? ಎಂದು ಅವರು ಪ್ರಶ್ನಿಸಿದರು.

ಕೊಪ್ಪ ತಾಲ್ಲೂಕು ಬೊಮ್ಮಲಾಪುರದಲ್ಲಿ ಶಿಕ್ಷಕ ಗಜೇಂದ್ರ ಸಹೋದರರ ಮನೆಯಲ್ಲಿ ಸಹಪಂಕ್ತಿ ಭೋಜನ ನಡೆಯಿತು
ಜಾತಿ ರಹಿತವಾಗಿ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮದ ಭಾಗವಾಗಿ ಇದು ಮೊದಲ ಹೆಜ್ಜೆ. ಇಡೀ ಭಾರತದಾದ್ಯಂತ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹರಿಹರಪುರ ಮಠ

ಎಲ್ಲ ಸಮುದಾಯ ಒಳಗೊಂಡ ಕಾರ್ಯಕ್ರಮ..

ಇತ್ತೀಚೆಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆದಿತ್ತು. ಆ ಸಂದರ್ಭದಲ್ಲಿ ಹರಿಹರಪುರ ಮಠದ ಸ್ವಾಮೀಜಿ ಸಮಷ್ಟಿ ಸತ್ಯನಾರಾಯಣ ಪೂಜೆ ನಡೆಸಿ ಸಹಪಂಕ್ತಿ ಭೋಜನ ಆಯೋಜಿಸಲು ಕರೆ ನೀಡಿದ್ದರು. ಅದರಂತೆ ಬೊಮ್ಮಲಾಪುರ ನಿವಾಸಿ ಶಿಕ್ಷಕ ಗಜೇಂದ್ರ ತ್ರಿಪುರೇಂದ್ರ ಸಹೋದರರು ಮನೆಯಲ್ಲಿ ಗುರುವಾರ ಸಮಷ್ಟಿ ಸತ್ಯನಾರಾಯಣ ಪೂಜೆ ಆಯೋಜಿಸಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯದ ಜನರು ಭಾಗವಹಿಸಿದ್ದರು. ತಾರತಮ್ಯ ರಹಿತವಾಗಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದರು. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಗೌರವಾಧ್ಯಕ್ಷ ಎಸ್.ಎನ್. ರಾಮಸ್ವಾಮಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ್ ಅದ್ದಡ ಮತ್ತಿತರ ಮುಖಂಡರೂ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.