ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕು ಪಡೆದಿದ್ದು, ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.
ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ ತಾಲ್ಲೂಕಿನ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ. ಇದರಿಂದಾಗಿ ಕಳಸ–ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಇನ್ನೊಂದೆಡೆ ಕೊಪ್ಪ ಸಮೀಪದ ನಾರ್ವೆ ಬಳಿ ಕಳೆದ ವಾರ ಭೂಕುಸಿತ ಉಂಟಾಗಿತ್ತು. ಮಳೆಗೆ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಕೊಪ್ಪ–ಬಾಳೆಹೊನ್ನೂರು ಸಂಚಾರ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.
ವಸ್ತಾರೆ ಮಾವಿನಹಳ್ಳಿ ಬಳಿ ಮರವೊಂದು ರಸ್ತೆಗೆ ಉರುಳಿದ್ದು, ಚಿಕ್ಕಮಗಳೂರು– ಮೂಡಿಗೆರೆ ನಡುವಿನ ವಾಹನ ಸಂಚಾರ ಕೆಲಕಾಲ ಬಂದ್ ಆಗಿತ್ತು. ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು.
ಹಲವೆಡೆ ಮರಗಳು ಉರುಳಿ ಮನೆಗಳಿಗೆ ಹಾನಿಯಾಗಿದೆ. ಬಾಳೆಹೊನ್ನೂರಿನಲ್ಲಿ ಗೋಶಾಲೆ ಮೇಲೆ ತೆಂಗಿನ ಮರ ಬಿದ್ದಿದೆ. ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪದಿಂದ ನೇರಳೆಕೊಪ್ಪ ಮತ್ತು ಆಲಂದೂರು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಇದೇ ವ್ಯಾಪ್ತಿಯ ಹಳ್ಳೂರು ಗದ್ದೆ ಸೇತುವೆ, ಮಂಜಿನಕೊಪ್ಪ ಗ್ರಾಮದ ಸೇತುವೆಗಳೂ ಜಲಾವೃತಗೊಂಡಿವೆ. ಹಲವೆಡೆ ತೋಟ ಹಾಗೂ ಗದ್ದೆಗಳಿಗೂ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.