ADVERTISEMENT

ತರೀಕೆರೆ: ಕಡೂರಿನಲ್ಲಿ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:06 IST
Last Updated 7 ಅಕ್ಟೋಬರ್ 2021, 7:06 IST
ತರೀಕೆರೆ ತಾಲ್ಲೂಕಿನ ಕಟ್ಟೆಹೊಳೆ ಯಲ್ಲಿ ನೀರು ತುಂಬಿ ಹರಿಯುತ್ತಿರುವುದು.
ತರೀಕೆರೆ ತಾಲ್ಲೂಕಿನ ಕಟ್ಟೆಹೊಳೆ ಯಲ್ಲಿ ನೀರು ತುಂಬಿ ಹರಿಯುತ್ತಿರುವುದು.   

ತರೀಕೆರೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದು, ರಸ್ತೆಗಳ ಮೇಲೆ ಹಳ್ಳದ ನೀರು ಹರಿದು ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಮಂಗಳವಾರ ರಾತ್ರಿಯಿಂದ ಮಳೆ ಬರುತ್ತಿದೆ. ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಎಡೆಬಿಡದೆ ಮಳೆ ಸುರಿದ ಕಾರಣ, ಪಟ್ಟಣದ ಕೋಟೆ ಕ್ಯಾಂಪ್, ಕೋಡಿ ಕ್ಯಾಂಪ್, ಬೋವಿ ಕಾಲೊನಿ, ವಿಜಯ ನಗರ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಚರಂಡಿ ನೀರು ರಸ್ತೆಗೆ ಬಂದಿತ್ತು. ಕೆಲವೆಡೆ ಜನರ ವಾಸಸ್ಥಳಗಳಿಗೆ ನುಗ್ಗಿದೆ.

ತಾಲ್ಲೂಕಿನ ಅಮೃತಾಪುರ ಹೋಬಳಿ, ಲಿಂಗದಹಳ್ಳಿ ಹೋಬಳಿ ಹಾಗೂ ಕಸಬಾ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ರಂಗಾಪುರದ ಹಳ್ಳದ ನೀರು ಹರಿದ ಕಾರಣ ಕಸಬಾ ಹೋಬಳಿಯ ಇಟ್ಟಿಗೆ, ಎ.ರಾಮನಹಳ್ಳಿ ಹಾಗೂ ಬಿ.ರಾಮನಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ADVERTISEMENT

ಹೋಬಳಿಯ ಕಟ್ಟೆಹೊಳೆಯಲ್ಲಿ ನೀರು ತುಂಬಿ ಹರಿಯಿತು. ಲಕ್ಕವಳ್ಳಿ ಹೋಬಳಿಯ ಮುಡುಗೋಡು ಗ್ರಾಮದಲ್ಲಿ ಇಂದ್ರಾಣಿ ಮತ್ತು ವಿಜಯ ಎಂಬುವರ ಮನೆಗಳು ಭಾಗಶಃ ಜಖಂಗೊಂಡಿವೆ. ಹೋಬಳಿಯ ಮಾಳಿಕೊಪ್ಪ ಗ್ರಾಮದಲ್ಲಿ ಮರ ಬಿದ್ದು, 10 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

ಕಡೂರಿನಲ್ಲೂ ವರ್ಷಧಾರೆ
ಕಡೂರು:
ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಡೀ ಸುರಿದ ಮಳೆ ಬುಧವಾರವೂ ಮುಂದುವರಿಯಿತು.

ಒಂದೇ ಸಮನೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಹೊಲ ಗದ್ದೆಗಳು ಜಲಾವೃತವಾದರೆ, ಹಳ್ಳ– ಕಾಲುವೆಗಳು ತುಂಬಿ ಹರಿದವು. ಎಂ.ಕೋಡಿಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಹರಿದರೆ, ತಂಗಲಿ ಕೆರೆ ಎರಡನೇ ಬಾರಿಗೆ ಕೋಡಿ ಹರಿದಿದೆ. ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಪಟ್ಟಣದ ಬನ್ನಿಮರದ ಬಳಿಯ ಐಟಿಐ ಕಾಲೇಜಿನ ಹತ್ತಿರದ ಫರೀದಾ ಜಾಫರ್ ಎಂಬುವವರ ಮನೆಯ ಚಾವಣಿ ಮಂಗಳವಾರ ಕುಸಿದು ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ. ಕೆಲವೆಡೆ ರಸ್ತೆ ಬದಿಯ ಹಳೆಯ ಮರಗಳು ಉರುಳಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.

ಸೋಮವಾರ ಸಂಜೆ ಸುರಿದ ಮಳೆಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎರಡು ಅಡಿಗೂ ಹೆಚ್ಚು ನೀರು ಹರಿದಿದೆ. ವಾಹನ ಸವಾರರು ಪರದಾಡಿದರು. ಇನ್‌ಸ್ಪೆಕ್ಟರ್‌ ಮಂಜುನಾಥ್ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ರಮ್ಯಾ ಮಳೆಯಲ್ಲಿಯೇ ಸಂಚಾರ ನಿಯಂತ್ರಿಸಿದರು. ತಾಲ್ಲೂಕಿನ ಕಸಬಾ (14 ಮಿ.ಮೀ), ಬೀರೂರು (4.4) ಸಖರಾಯಪಟ್ಟಣ (28),ಸಿಂಗಟಗೆರೆ (14.2)ಯಮ್ಮೆದೊಡ್ಡಿ (20.2),ಯಗಟಿ (13.8),ಗಿರಿಯಾಪುರ (12.0) ಬಾಸೂರು (8.0) ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.