ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಹಲವೆಡೆ ವಿದ್ಯುತ್ ಕಂಬ ಮತ್ತು ಮರಗಳು ಉರುಳಿ ಬಿದ್ದಿವೆ. ಮಲೆನಾಡಿನ ಗ್ರಾಮೀಣ ಭಾಗ ಕಗ್ಗತ್ತಲಿನಲ್ಲಿ ಮುಳುಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮಳೆ ಜತೆಗೆ ಗಾಳಿ ಕೂಡ ವೇಗವಾಗಿ ಬೀಸುತ್ತಿದ್ದು, ಇವರೆಗೆ 2443 ವಿದ್ಯುತ್ ಕಂಬಗಳು ಉರಳಿವೆ ಎಂದು ಮೆಸ್ಕಾಂ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮಳೆ ನಡುವೆಯೂ ದುರಸ್ತಿ ಕಾರ್ಯವನ್ನು ಸಿಬ್ಬಂದಿ ಮುಂದುವರಿಸಿದ್ದಾರೆ. ಆದರೂ, ಬಾಳೆಹೊನ್ನೂರು, ಜಯಪುರ, ಕಳಸ, ಕೊಟ್ಟಿಗಾರ, ಮಾಗುಂಡಿ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ 10 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಸಮೀಪದ ಪಟ್ಟಣಗಳಿಗೆ ತೆರಳಿ ಮೊಬೈಲ್ ಫೋನ್ ಚಾರ್ಜ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಬ್ಬಾಳೆ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಕಳಸ–ಹೊರನಾಡು ಸಂಪರ್ಕ ಕಡಿತವಾಗಿದೆ. ಕಳಸ- ಕಾರ್ಕಳ ರಾಜ್ಯ ಹೆದ್ದಾರಿಯ ಕುದುರೆಮುಖ ಬಳಿ ಭೂಕುಸಿತದಿಂದ ರಸ್ತೆಗೆ ಹಾನಿ ಆಗಿದೆ. ಹಳೆಯ ಸೇತುವೆ ಪಕ್ಕದಲ್ಲೇ ಕುಸಿತ ಉಂಟಾಗಿದ್ದು, ದುರಸ್ತಿಯಾಗದಿದ್ದರೆ ಕಳಸ–ಕಾರ್ಕಳ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ಕಡೂರು ತಾಲ್ಲೂಕಿನ ಐತಿಹಾಸಿಕ ಮಧಗದ ಕೆರೆ ಮತ್ತು ತರೀಕೆರೆಯ ದೊಡ್ಡ ಕೆರೆಗಳು ಭರ್ತಿಯಾಗಿ ಕೊಡಿಯಲ್ಲಿ ನೀರು ಹರಿಯುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಗಾಳಿ ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ಥ
ಆಲ್ದೂರು:ಗಾಳಿ, ಮಳೆ ಆರ್ಭಟ ಮುಂದುವರಿದಿದ್ದು, ಪಟ್ಟಣದ ಬಿರಂಜಿ ಹಳ್ಳ ಮೈದುಂಬಿ ಹರಿದು ಅಕ್ಕಪಕ್ಕದ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಗಾಳಿಯ ರಭಸಕ್ಕೆ ಮರಗಳು ರಸ್ತೆಗೆ ಉರುಳುವುದು ಸಾಮಾನ್ಯವಾಗಿದ್ದು, ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಪದೇ ಪದೇ ಕಡಿತಗೊಳ್ಳುತ್ತಿದೆ. ಇದರಿಂದ ಜನರು ಜನಸಾಮಾನ್ಯರು ಪರದಾಡುವಂತೆ ಆಗಿದೆ. ಕಾಫಿ ತೋಟಗಳಲ್ಲಿ ರಭಸದ ಗಾಳಿಗೆ ಮರ ಬೀಳುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಸ್ಟೇಟ್ ಮಾಲೀಕರು ಕಾರ್ಮಿಕರಿಗೆ ರಜೆಯನ್ನು ಘೋಷಿಸಿದ್ದಾರೆ.
ಕೊಡಿ ಹರಿದ ಮಧಗದ ಕರೆ: ರೈತರ ಸಂತಸಕಡೂರು: ತಾಲ್ಲೂಕಿನ ಜೀವನಾಡಿ ಐತಿಹಾಸಿಕ ಮಧಗದ ಕೆರೆ ಶುಕ್ರವಾರ ಪೂರ್ಣ ಭರ್ತಿಯಾಗಿ ಕೋಡಿ ಹರಿಯಲಾರಂಭಿಸಿದೆ. ಸುತ್ತಲಿನ ಗ್ರಾಮಗಳ ರೈತರ ಸಂಭ್ರಮ ಹೆಚ್ಚಿದ್ದು ಕೆರೆ ಕೋಡಿ ಹರಿಯುವ ದೃಶ್ಯ ಕಣ್ತುಂಬಿಕೊಳ್ಳಲು ಗ್ರಾಮಸ್ಥರು ತಂಡಗಳಲ್ಲಿ ಬರುತ್ತಿದ್ದಾರೆ. ಮಧಗದ ಕೆರೆ ಮಂಗಳವಾರ ಅಥವಾ ಶುಕ್ರವಾರ ಕೋಡಿ ಹರಿಯುವುದು ವಿಶೇಷ. ಈ ಬಾರಿಯೂ ಅದು ಮುಂದುವರಿದಿದೆ. ಸದ್ಯ ಕೋಡಿ ಹರಿಯಲು ಬೇಕಿರುವುದಕ್ಕಿಂತಲೂ ಒಂದು ಅಡಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕಿ ಹೊರ ಹರಿಯುತ್ತಿದೆ. ಮಧಗದ ಕೆರೆಯಿಂದ ಕೋಡಿ ಹರಿಯುವ ನೀರು ತಾಲ್ಲೂಕಿನ 40ಕ್ಕೂ ಹೆಚ್ಚು ಕೆರೆಗಳ ಒಡಲು ತುಂಬಲಿದೆ. ಸಖರಾಯಪಟ್ಟಣ ಬಳಿಯ ಅಯ್ಯನಕೆರೆ ಸಹ ತುಂಬುವ ಹಂತದಲ್ಲಿದೆ. ಇವೆರಡೂ ಕೆರೆಗಳ ನೀರು ಭರ್ತಿಯಾಗಿ ಹರಿದಾಗ ತಾಲ್ಲೂಕಿನ ವೇದಾವತಿ ನದಿಗೆ ಜೀವಕಳೆ ಬರಲಿದೆ. ಸದ್ಯ ಮಧಗದ ಕೆರೆಯ ಹೊರಹರಿವು ಹೆಚ್ಚಾಗಿರುವುದರಿಂದ ಈ ಕೆರೆ ಪಾತ್ರದ ಜನರು ಜಾನುವಾರುಗಳನ್ನು ಮೇಯಲು ಬಿಡುವಾಗ ಎಚ್ಚರ ವಹಿಸುವಂತೆ ತಹಶೀಲ್ದಾರ್ ಮಂಜುನಾಥ್ ಸೂಚಿಸಿದ್ದಾರೆ. ಮಧಗದ ಕೆರೆ ಕೋಡಿ ಹರಿದರೆ ತಾಲ್ಲೂಕಿನಲ್ಲಿ ಸುಮಾರು 12 ದಿನ ಮಳೆ ಬರುವುದಿಲ್ಲ ಪ್ರತೀತಿ ಇದೆ. ಆದರೆ ಶುಕ್ರವಾರ ದಿನವಿಡೀ ಧಾರಾಕಾರ ಮಳೆ ಸುರಿಯಿತು.
ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮರ
ಆಲ್ದೂರು: ಸಮೀಪದ ದೊಡ್ಡಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಬನ್ನೂರು ಗ್ರಾಮದ ಬಳಿ ಚಿಕ್ಕಮಗಳೂರು– ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿ ಪಯಣಿಸುತ್ತಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.