ಶೃಂಗೇರಿಯಲ್ಲಿ ಪ್ರವಾಹದ ಸ್ಥಿತಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಅಲ್ಲಲ್ಲಿ ಭೂಕುಸಿತ, ಮನೆ ಕುಸಿತ, ಮರ ಬೀಳುವುದು ಮುಂದುವರಿದಿದೆ. ವಿಪರೀತ ಮಳೆಯಿಂದ ಶೃಂಗೇರಿಯ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಶೃಂಗೇರಿಯಲ್ಲಿ ಎತ್ತ ನೋಡಿದರೂ ನೀರೇ ತುಂಬಿಕೊಂಡಿದ್ದು, ಪಟ್ಟಣದ ಹಲವು ಮನೆಗಳು, ಅಂಗಡಿಗಳು ನೀರಿನಲ್ಲಿ ಮುಳುಗಿವೆ. ತುಂಗಾ ನದಿಯ ನೀರು ನೆಮ್ಮೂರ್ ರಸ್ತೆ ನೀರಿನಿಂದ ಆವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರವಾಸಿಗರಿಲ್ಲದೆ ಇಡೀ ಶೃಂಗೇರಿ ಬಣಗುಡುತ್ತಿದೆ.
ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶಾರದ ಪೀಠ ಭಾರತೀ ತೀರ್ಥ ಸ್ವಾಮಿಜೀ ಅವರ ಸ್ನಾನಘಟ್ಟ ಹಾಗೂ ಸಂದ್ಯಾ ವಂದನೆ ಮಂಟಪ ಮುಳುಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಕಾಳಿಂಗ ಸೇರಿ ಹಲವು ಹಾವುಗಳು, ಮರದ ದಿಮ್ಮಿಗಳು ತೇಲುತ್ತಿದ್ದವು.
ಹೆಬ್ಬೆ ಜಲಪಾತ, ಮಾಣಿಕ್ಯಾಧಾರ, ಝರಿ ಜಲಪಾತ, ಸೂರಮನೆ, ಬರ್ಕಣ, ಸಿರಿಮನೆ, ಸೂತನಬ್ಬಿ ಜಲಪಾತಗಳು ಉಕ್ಕಿ ಹರಿಯುತ್ತಿದೆ.
ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ರಸ್ತೆಗೆ ಮರ ಬಿದ್ದು ಒಂದೂವರೆ ಗಂಟೆ ಕೊಪ್ಪ – ಜಯಪುರ ರಸ್ತೆ ಸಂಚಾರ ಕಡಿತಗೊಂಡಿತ್ತು. ಕಳಸ- ಹೊರನಾಡು ರಸ್ತೆಯ ಹೆಬ್ಬೊಳೆಯ ಸೇತುವೆ ಮೇಲೆ ಸೋಮವಾರ ರಾತ್ರಿ ನದಿ ನೀರು ಉಕ್ಕಿ ಹರಿಯಿತು. ಹೊರನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು. ಹಳುವಳ್ಳಿ ಮೂಲಕ ಹೊರನಾಡಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದರೂ, ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು.
ಮರಸಣಿಗೆ ಸಮೀಪದ ಗಾಳಿಗಂಡಿ, ಹಿರೇಬೈಲು ಸಮೀಪದ ಕಂಕೋಡು, ಸಂಸೆ ಸಮೀಪದ ದೇವರಮನೆ, ಹೊರನಾಡು ಸಮೀಪದ ಮುಂಡುಗದಮನೆ ಪ್ರದೇಶದಲ್ಲಿ ಧರೆ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.