ADVERTISEMENT

ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯಧನ

ಪಟ್ಟಣ ಪಂಚಾಯಿತಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:44 IST
Last Updated 29 ಡಿಸೆಂಬರ್ 2022, 4:44 IST
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಅಧ್ಯಕ್ಷೆ ಜುಬೇದಾ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಅಧ್ಯಕ್ಷೆ ಜುಬೇದಾ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.   

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯ ಎಲ್ಲ ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯಧನ ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸಲಹೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷೆ ಜುಬೇದಾ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಗೋ ಶಾಲೆಯ ನಿರ್ಮಾಣ ಮತ್ತು ನಿರ್ವಹಣೆಗೆ ಸರ್ಕಾರ ಅನುದಾನ ನೀಡಿದರೆ ವಾರ್ಡ್ 5ರಲ್ಲಿ ಸ್ಥಳನಿಗದಿ ಮಾಡಲಾಗುವುದು. ಪಟ್ಟಣದ ಬಸ್ ನಿಲ್ದಾಣದಿಂದ ಬಸ್ತಿಮಠದವರೆಗೆ ರಸ್ತೆಯ ಎರಡು ಬದಿ ಇಂಟರ್ ಲಾಕ್ ಅಳವಡಿಕೆಗೆ ಹಾಗೂ ಸಂತೆ ಮಾರುಕಟ್ಟೆ ಸಮೀಪ ಸುಲಭ್ ಶೌಚಾಲಯ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.

ADVERTISEMENT

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಸ್ವಯಂ ಉದ್ಯೋಗ ಕೈಗೊಳ್ಳಲು ಡೇ ನಲ್ಮ್ ಯೋಜನೆಯಡಿ ಪುರುಷರಿಗೆ ಚಾಲನಾ ತರಬೇತಿ ಹಾಗೂ ಮಹಿಳೆಯರಿಗೆ ಟೇಲರಿಂಗ್ ತರಬೇತಿಗೆ ಅನುದಾನ ಮೀಸಲಿಡಬೇಕು. ಅಂಗವಿಕಲರಿಗೆ ಒಂದು ಸಮುದಾಯ ಭವನವನ್ನು ನಿರ್ಮಿಸಿ, ಅಲ್ಲಿಯೇ ಆರೋಗ್ಯ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ವಿಧಾನಪರಿಷತ್ ಸದಸ್ಯರ ಅನುದಾನದ ಕಟ್ಟಡವನ್ನು ಅಟಲ್ ಜಿ ಜನಸ್ನೇಹಿ ಕೇಂದ್ರವನ್ನಾಗಿ ಪರಿವರ್ತಿಸಿದರೆ, ಪಟ್ಟಣದ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತದೆ. ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಒಂದು ಮಳಿಗೆಯನ್ನು ಮೀಸಲಿಡಬೇಕು. ಸಾಹಿತ್ಯ,ಸಂಸ್ಕೃತಿ ಹಾಗೂ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು. ನೀರಿನ ಟ್ಯಾಂಕ್ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಟ್ಟು, ಅಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸಲಹೆ ನೀಡಿದರು.

ಸದಸ್ಯ ಮುಕುಂದ ಮಾತನಾಡಿ, ಪಟ್ಟಣಕ್ಕೆ ಮೂಲಕ ಸೌಕರ್ಯ ಒದಗಿಸುವಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದರು.

ಪುಡ್ ಕೋರ್ಟ್ ನಿರ್ಮಾಣ, ಪೊಲೀಸ್ ಠಾಣೆಯ ಪಕ್ಕದ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ನೂತನ ಮಳಿಗೆ ನಿರ್ಮಿಸಲು ಹಾಗೂ ಸಾಧಕ ಕ್ರೀಡಾಪಟುಗಳು ಹಾಗೂ ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಅನುದಾನ ಮೀಸಲಿಡಬೇಕು ಎಂದು ಸದಸ್ಯರು ಸಲಹೆ ನೀಡಿದರು.

ಉಪಾಧ್ಯಕ್ಷೆ ಉಮಾ ಕೇಶವ್, ಮುಖ್ಯಾಧಿಕಾರಿ ಎ.ಚಂದ್ರಕಾಂತ್, ಸದಸ್ಯರಾದ ಶೋಜಾ, ಮುನಾವರ್ ಪಾಷ, ಸುರಯ್ಯಾ ಬಾನು, ರೀನಾಮೋಹನ್, ನಾಮನಿರ್ದೇಶನ ಸದಸ್ಯ ಚಂದ್ರಪ್ಪ, ಸಿಬ್ಬಂದಿಗಳಾದ ಲಕ್ಷ್ಮಣಗೌಡ, ಉಷಾ, ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.