ADVERTISEMENT

ಸುಬ್ರಹ್ಮಣ್ಯ: ಅಸಹಾಯಕ ವೃದ್ಧೆಯ ಮನೆ ದುರಸ್ತಿ

ಧರ್ಮಸ್ಥಳ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:16 IST
Last Updated 17 ಮಾರ್ಚ್ 2021, 5:16 IST
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ಒಂಟಿ ವೃದ್ಧೆಯ ಮನೆ ದುರಸ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡ
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ಒಂಟಿ ವೃದ್ಧೆಯ ಮನೆ ದುರಸ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡ   

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ಒಂಟಿ ವೃದ್ಧೆಯ ಮನೆಯನ್ನು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ದುರಸ್ತಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಟ್ಟ ಎಂಬಲ್ಲಿನ ಚನಿಯಾ ಎಂಬುವ ವರ ಪತ್ನಿ 70 ವರ್ಷ ಪ್ರಾಯದ ಮಾನಿಕಾ ಅವರ ಮನೆಯ ಮಾಡು ಈಚೆಗೆ ಮುರಿದು ಬಿದ್ದಿತ್ತು. ಹೀಗಾಗಿ, ಟಾರ್ಪಲು ಮಾಡಿನ ಅಡಿಯಲ್ಲಿ ಅಸಹಾಯಕಿಯಾಗಿ ಒಂಟಿಯಾಗಿ ವಾಸಿಸುತ್ತಿದ್ದರು.

ವೃದ್ಧೆಯ ಅಸಹಾಯಕ ಸ್ಥಿತಿಯ ಮಾಹಿತಿ ಅರಿತ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಚರ್ಚಿಸಿ, ಮನೆ ದುರಸ್ತಿಗೆ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಿದ್ದಾರೆ. ಮನೆ ಮಾಡನ್ನು ತೆರವುಗೊಳಿಸಿ, ಹೊಸ ಮಾಡನ್ನು ನಿರ್ಮಿಸಿದ್ದಾರೆ. ಮನೆಗೆ ಬೇಕಿದ್ದ ಕಬ್ಬಿಣ ಸರಳಿನ ವೆಚ್ಚವನ್ನು ವೃದ್ಧೆ ನೀಡಿದ್ದು, ಉಳಿದ ಖರ್ಚನ್ನು ನಿರ್ವಹಣಾ ತಂಡವೇ ಭರಿಸಿದೆ.

ADVERTISEMENT

ಸಂಧ್ಯಾ ಸುರಕ್ಷಾ ಯೋಜನೆಯ ಮಾಸಾಶನವೇ ವೃದ್ಧೆಗೆ ಜೀವನಕ್ಕೆ ಆಧಾರವಾಗಿದೆ. ಮನೆಗೆ ವಿದ್ಯುತ್ ಸೌಲಭ್ಯ, ನೀರು ವ್ಯವಸ್ಥೆ ಇದೆ.

ಮನೆ ದುರಸ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಸತೀಶ್ ಮನಿಕಂಠ ಕಟ್ಟ, ಸದಸ್ಯರಾದ ಕೆ.ಮಣಿಕಂಠ, ಲಕ್ಷ್ಮಣ ಕುಂಜತ್ತಾಡಿ ಐನೆಕಿದು, ಕುಸುಮಾಧರ, ಯಶವಂತ, ಚಂದ್ರಶೇಖರ ಕೋನಡ್ಕ, ಮುತ್ತಪ್ಪ ಕೆ., ಸದಾಶಿವ, ಶ್ರೀನಿವಾಸ ಕೆ., ಕೆ.ಹರ್ಷ, ಕುಶಾಲಪ್ಪ ಜಾಲು, ಬಾಲಸುಬ್ರಹ್ಮಣ್ಯ, ಅಶೋಕ ಮಿತ್ತೋಡಿ, ಜಯಪ್ರಕಾಶ್ ಪಾಲ್ಗೊಂಡಿದ್ದರು.

ತಂಡದಿಂದ ಸಮಾಜಮುಖಿ ಕಾರ್ಯ: ವಿಪತ್ತು ನಿರ್ವಹಣಾ ತಂಡವು ತರಬೇತಿ ಪಡೆದ ಯುವಕರ ತಂಡವಾಗಿದ್ದು, ವಿಪತ್ತು ನಿರ್ವಹಣೆಯಲ್ಲಿ ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ರಚಿಸಲಾಗಿದೆ. ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ತಂಡವು ಈವರೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟ ಸ್ವಚ್ಛತೆ, ಸೇತುವೆ ದುರಸ್ತಿ ಸೇರಿದಂತೆ ಹಲವು ಕಾರ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.