ADVERTISEMENT

ಹಿಂದೂ ಗಣಪತಿ: ಅದ್ಧೂರಿ ಮೆರವಣಿಗೆ

ಗೊಂಬೆ ಮೇಳ, ಚಂಡೆವಾದ್ಯ, ನಾದಸ್ವರ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆ ಭಾಗಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:20 IST
Last Updated 7 ಸೆಪ್ಟೆಂಬರ್ 2025, 8:20 IST
ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ನಡೆಯಿತು
ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ನಡೆಯಿತು   

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಾಲಯ ಆವರಣದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಮೆರವಣಿಗೆ ನಗರದಲ್ಲಿ ಶನಿವಾರ ಅದ್ಧೂರಿಯಿಂದ ನಡೆಯಿತು.

ಬಣ್ಣ–ಬಣ್ಣದ ಹೂವು, ಹಾರಗಳಿಂದ ಅಲಂಕಾರಗೊಂಡಿದ್ದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್‌ ಮೇಲೆ ಪ್ರತಿಷ್ಠಾಪಿಸಲಾಯಿತು. ಬಸವನಹಳ್ಳಿ ಮುಖ್ಯರಸ್ತೆಯಿಂದ ಹೊರಟು, ವಿಜಯಪುರದ ಆಂಜನೇಯಸ್ವಾಮಿ ದೇವಾಲಯ ರಸ್ತೆ, ಶ್ರೀಕಂಠಪ್ಪ ವೃತ್ತ, ಕೆಇಬಿ ವೃತ್ತ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ ಸಾಗಿತು.

ಬೃಹತ್ ಯಾತ್ರೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿದ್ದ ಯುವಕರು, ಯುವತಿಯರು, ಕಾರ್ಯಕರ್ತರು ಶ್ವೇತವಸ್ತ್ರಧಾರಿಗಳಾಗಿ ಕೇಸರಿ–ನೀಲಿ ಮಿಶ್ರಿತ ಶಾಲು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ADVERTISEMENT

ಗೊಂಬೆ ಮೇಳ ಸೇರಿ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಆಂಜನೇಯ ಮೂರ್ತಿ, ಚಲನಚಿತ್ರ ನಟ ರಾಜ್‌ ಬಿ.ಶೆಟ್ಟಿ ಹೋಲುವ ಎತ್ತರದ ಬೊಂಬೆ, ಬೇತಾಳ, ರಾಕ್ಷಸ ಮಾದರಿಯ ಮೆರವಣಿಗೆಯ ಆಕರ್ಷಣೆಯಾಗಿತ್ತು. ಗೊರಿಲ್ಲಾ ಮಾದರಿಯ ಗೊಂಬೆಗಳು ಜನರ ಸೆಲ್ಫಿ ಕೇಂದ್ರವಾಗಿದ್ದವು. ಚಂಡೆವಾದ್ಯ, ನಾದಸ್ವರ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.

ಯುವಕರು ಡಿ.ಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರಿಗೂ ಪ್ರತ್ಯೇಕ ಡಿ.ಜೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಯುವತಿಯರು ಕುಣಿದು ಸಂಭ್ರಮಿಸಿದರು. ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ ಬಳಿಕ ಗಣೇಶ ಮೂರ್ತಿಯನ್ನು ಬೇಲೂರು ರಸ್ತೆಯ ಕೋಟೆ ಕೆರೆಯ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.