
ಕೊಪ್ಪ: ‘ಹಿಂದೂ ಸಮಾಜೋತ್ಸವ ವೇದಿಕೆಗೆ ಸೀಮಿತವಾಗಬಾರದು. ನಾವೆಲ್ಲಾ ಒಂದು ಎಂಬುದು ಹೃದಯದಿಂದ ಬರಬೇಕು’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕು ಹಿಂದೂ ಸಮಾಜೋತ್ಸವ ಆಚರಣೆ ಸಮಿತಿ ಸಹಭಾಗಿತ್ವದಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ಹಿರೇಕೊಡಿಗೆ ಮಂಡಲ ವತಿಯಿಂದ ಬೊಮ್ಮಲಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಕೌಟುಂಬಿಕ ಮೌಲ್ಯ ಅಧಃಪತನಗೊಂಡಾಗ ಸಂಸ್ಕೃತಿ ನಾಶವಾಗುತ್ತದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ವಿಚಾರದಲ್ಲಿ ರಾಜಕೀಯ, ಪಕ್ಷ, ಜಾತಿಯನ್ನು ತರಬಾರದು ಎಂದರು.
ಎಲ್ಲಾ ಜಾತಿಯವರನ್ನು ತಾರತಮ್ಯ ರಹಿತವಾಗಿ ಒಗ್ಗೂಡಿಸಿ ಹಿಂದೂ ಸಂರಕ್ಷಣೆಗೆ ಬೇಲಿ ಹಾಕಬೇಕು. ಸಾಮರಸ್ಯಕ್ಕೆ ಹೆಚ್ಚು ಒತ್ತು ಕೊಡಬೇಕು. ಇತರೆ ಧರ್ಮದವರಿಗೆ ಪರ್ಯಾಯವಾಗಿ ಅನೇಕ ರಾಷ್ಟ್ರಗಳಿವೆ. ಹಿಂದೂಗಳಿಗೆ ಇರುವುದೊಂದೇ ರಾಷ್ಟ್ರ. ದಲಿತರನ್ನು ಮುಂದಿಟ್ಟುಕೊಂಡು ಹಿಂದೂಗಳನ್ನು ಒಡೆಯುತ್ತಿದ್ದಾರೆ ಎಂದರು.
ವರ್ಷದಲ್ಲಿ ಒಮ್ಮೆ ಸಮಷ್ಟಿ ಕಲ್ಯಾಣ ಸತ್ಯನಾರಾಯಣ ಪೂಜೆ ಮಾಡಿ. ಎಲ್ಲಾ ಜಾತಿಯವರನ್ನು ಸೇರಿಸಿ ಸಹಪಂಕ್ತಿ ಭೋಜನ ಮಾಡಿಸಿ. ಸಣ್ಣ ಪರಿವರ್ತನೆ ಆದರೆ 25 ವರ್ಷಗಳ ನಂತರ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದರು.
ಹಿಂದೂ ಜಾಗರಣ ವೇದಿಕೆಯ ಮಂಜುನಾಥ ಸ್ವಾಮಿ ದಿಕ್ಸೂಚಿ ಭಾಷಣ ಮಾಡಿ, ಸ್ವಾತಂತ್ರ್ಯ ಸಂದರ್ಭದಲ್ಲಿ ಗುಲಾಮಗಿರಿ ವಿರುದ್ಧ ಹೋರಾಡಲು ಶಕ್ತಿಯಾಗಿದ್ದು ವಂದೇ ಮಾತರಂ, ಅದು 150 ವರ್ಷಗಳನ್ನು ಪೂರೈಸಿದೆ. ಆರ್‌ಎಸ್‌ಎಸ್ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಿಂದೂ ಸಮಾಜೋತ್ಸವ ಆಚರಣೆ ಸಮಿತಿ ಉಪಾಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಸಂಘದ ಶಾಖೆ ಕಾರ್ಯ ಚಟುವಟಿಕೆ ಮಾಡುತ್ತಿದೆ. ಸ್ವಯಂ ಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿದ್ದಕ್ಕಾಗಿ ಹಿಂದೂ ಸಮಾವೇಶ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಮೇಲು ಕೀಳು ಭಾವನೆ ತೊರೆದು ಎಲ್ಲರೂ ಒಂದಾಗಿ ಬದುಕಬೇಕು ಎಂದು ಹೇಳಿದರು.
ತಾಲ್ಲೂಕು ಹಿಂದೂ ಸಮಾಜೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಲ್.ಎಂ. ಪ್ರಕಾಶ್ ಕೌರಿ ಮಾತನಾಡಿದರು. ತ್ರಿಪುರಾಂತಕಿ ಅಮ್ಮನವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಮುಖಂಡರಾದ ತ್ರಿಪುರೇಂದ್ರ, ರಾಘವೇಂದ್ರ, ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಭಾಗವಹಿಸಿದ್ದರು. ಕಿರಣಕೆರೆ ರಾಘವೇಂದ್ರ ರಾಷ್ಟ್ರ ಭಕ್ತಿಗೀತೆಗಳನ್ನು ಹಾಡಿದರು. ವೀರಗಾಸೆ, ಮದ್ದಳೆ, ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.